ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ: ವಾಪಸ್ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು, ಡಿ.21: ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಹಾಗೂ ಈಸ್ಟ್ ಪಾಯಿಂಟ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳಿಂದ ಹೆಚ್ಚುವರಿ ಯಾಗಿ ಪಡೆದಿದ್ದ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಮರಳಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಶುಲ್ಕ ನಿಯಂತ್ರಣಾ ಸಮಿತಿ ನಿಗದಿಪಡಿಸಿರುವ ಶುಲ್ಕಕ್ಕಿಂತಲೂ ಈ ಎರಡೂ ವೈದ್ಯಕೀಯ ಕಾಲೇಜುಗಳು ಹೆಚ್ಚು ಶುಲ್ಕ ಪಡೆದುಕೊಂಡಿರುವುದಾಗಿ ಮೇಲ್ವಿಚಾರಣಾ ಸಮಿತಿಗೆ 80 ವಿದ್ಯಾರ್ಥಿಗಳು ದೂರು ಸಲ್ಲಿಸಿದರು. ಹೀಗಾಗಿ, ಹೈಕೋರ್ಟ್ ಇಂತಹ ಆದೇಶ ನೀಡಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಹೆಚ್ಚುವರಿ ಶುಲ್ಕಕ್ಕೆ ಶೇ.6ರಷ್ಟು ಬಡ್ಡಿ ಸೇರಿಸಿ ಶುಲ್ಕವನ್ನು ಮರುಪಾವತಿಸುವಂತೆ ಆದೇಶ ಮಾಡಿದೆ.
ರಾಜ್ಯ ಸರಕಾರದಿಂದ ನೇಮಕವಾಗಿರುವ ನ್ಯಾಯಮೂರ್ತಿ ಬಿ.ಮನೋಹರ್ ನೇತೃತ್ವದ ಪ್ರವೇಶ ಮೇಲ್ವಿಚಾರಣಾ ಸಮಿತಿ ಈ ಆದೇಶ ಹೊರಡಿಸಿ ಸಂಬಂಧಪಟ್ಟ ಕಾಲೇಜುಗಳು ಬಡ್ಡಿಯೊಂದಿಗೆ ಹೆಚ್ಚುವರಿ ಶುಲ್ಕ ಮರು ಪಾವತಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರ ಹಾಗೂ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಶಿಫಾರಸ್ಸು ಮಾಡಿದೆ.
ಈ ದೂರನ್ನು ವಿಚಾರಣೆ ನಡೆಸಿದ ಶುಲ್ಕ ಮೇಲ್ವಿಚಾರಣಾ ಸಮಿತಿ ಹೆಚ್ಚುವರಿ ಶುಲ್ಕವನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ಆದೇಶಿಸಿದೆ.







