‘ಶೀಘ್ರ ಮಣಿಪಾಲದಲ್ಲಿ ಸಂಗೀತ ಅಕಾಡೆಮಿ ಆರಂಭ’
41ನೆಯ ವಾದಿರಾಜ-ಕನಕದಾಸ ಸಂಗೀತೋತ್ಸವ ಉದ್ಘಾಟನೆ

ಉಡುಪಿ, ಡಿ.21: ‘ಸಂಗೀತ’ ಎಂಬುದು ಜೀವನಕ್ಕೆ ಪೂರ್ಣತೆಯನ್ನು ಕೊಡುತ್ತದೆ. ಮನಸ್ಸನ್ನು ಸಂತೋಷಗೊಳಿಸುವ ಚಿಕಿತ್ಸಕ ಗುಣ ಸಂಗೀತಕ್ಕಿದೆ. ಸಂಗೀತವಿಲ್ಲದ ಜೀವನ ಅಪೂರ್ಣ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್‌ಎಜ್ಯುಕೇಶನ್ ಕುಲಸಚಿವ ಡಾ. ನಾರಾಯಣ ಸಭಾಹಿತ್ ಹೇಳಿದ್ದಾರೆ.
ಉಡುಪಿಯ ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಾಹೆ ಮಣಿಪಾಲ, ಎಂಜಿಎಂ ಕಾಲೇಜು ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಹಯೋಗದಲ್ಲಿ ಹಮ್ಮಿ ಕೊಂಡ 41ನೇ ವಾದಿರಾಜ ಕನಕದಾಸ ಸಂಗೀತೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಂಗೀತದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ಹಾಗೂ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಣಿಪಾಲ ಅಕಾಡೆಮಿ ಅಫ್ ಹೈಯರ್ ಎಜ್ಯುಕೇಶನ್ ಸದ್ಯದಲ್ಲಿಯೇ ಮಣಿಪಾಲದಲ್ಲಿ ಸಂಗೀತ ಅಕಾಡೆಮಿಯನ್ನು ಸ್ಥಾಪಿಸುವ ಯೋಜನೆಯೊಂದನ್ನು ರೂಪಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್ ಮಾತನಾಡಿ, ಕಳೆದ 41 ವರ್ಷಗಳ ಉತ್ಸವದ ಶ್ರೀಮಂತಿಕೆಯನ್ನು ಸ್ಮರಿಸಿದರು. ದಾಸಸಾಹಿತ್ಯ ಜನಸಾಮಾನ್ಯರಿಗೆ ತಲುಪಿಸಿದ ಜ್ಞಾನ ಭಂಡಾರ ಅಗಾಧವಾದದ್ದು. ಕಠಿಣ ವೆನಿಸುವ ವೇದಾಂತ ಆಧ್ಯಾತ್ಮ ವಿಷಯಗಳನ್ನು ಸರಳರೂಪದಲ್ಲಿ ನಮಗೆ ತಿಳಿಯುವಂತೆ ಹಾಡಿರುವುದೇ ಕನಕದಾಸ ವಾದಿರಾಜರ ಶ್ರೇಷ್ಠತೆ ಎಂದರು.
ಇದೇ ಸಂದರ್ಭದಲ್ಲಿ ಕಬ್ಬಿನಾಲೆ ವಸಂತ ಭಾರದ್ವಾಜರ ‘ಕನಕದಾಸರು’ ಕೃತಿ ಯನ್ನು ಅವರು ಬಿಡುಗಡೆಗೊಳಿಸಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ್ ಪ್ರೊ.ಎಂ.ಜಿ. ವಿಜಯ್ ಉಪಸ್ಥಿತರಿದ್ದರು. ಪ್ರೊ.ವರದೇಶ್ ಹಿರೇಗಂಗೆ ಸ್ವಾಗತಿಸಿದರು. ಉಮಾಶಂಕರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಂ. ಎಲ್. ಸಾಮಗ ವಂದಿಸಿದರು. ಭ್ರಮರಿ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿದ್ವಾಂಸ ಬಿ.ಗೋಪಾಲಾಚಾರ್ ‘ವಾದಿರಾಜ ಕನಕದಾಸ -ಸಾಮಾಜಿಕ ಚಿಂತನೆ’ ವಿಶೇಷ ಉಪನ್ಯಾಸ ನಡೆಯಿತು. ಅನಂತರ ಶಿಲ್ಪಾ ಕುಂತೂರು ಮತ್ತು ಬಳಗದಿಂದ ಕರ್ನಾಟಕ ಸಂಗೀತ, ಉಷಾ ಈಶ್ವರ ಭಟ್ ಮತ್ತು ಬಳಗದಿಂದ ಕರ್ನಾಟಕ ಸಂಗೀತ ಹಾಗೂ ಚೈತನ್ಯ ಜಿ. ಮಂಗಳೂರು ಮತ್ತು ಬಳಗದಿಂದ ಹಿಂದೂಸ್ಥಾನಿ ಹಾಡುಗಾರಿಕೆ ನಡೆಯಿತು.