ಫರಂಗಿಪೇಟೆ: ಜ. 20ರೊಳಗೆ ಮೀನುಮಾರುಕಟ್ಟೆ ತೆರವಿಗೆ ಸೂಚನೆ

ಫರಂಗಿಪೇಟೆ, ಡಿ. 21: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಕಾರ್ಯಚರಿಸುತಿರುವ ಮೀನು ಮಾರುಕಟ್ಟೆಯ ಜಾಗವು ರೈಲ್ವೇ ಇಲಾಖೆಗೆ ಒಳಪಡುವುದರಿಂದ ಮಾರುಕಟ್ಟೆಯನ್ನು ಜ. 20ರೊಳಗೆ ತೆರವುಗೊಳಿಸುವಂತೆ ಸೂಚಿಸಿದ್ದು, ಇದರಿಂದ ಮೀನು ವ್ಯಾಪರಸ್ಥರ ಬದುಕು ಅತಂತ್ರವಾಗಿದೆ.
ಇಲ್ಲಿನ ಮೀನು ವ್ಯಾಪಾರಸ್ಥರಿಗೆ ಶಾಶ್ವತ ಮೀನು ಮಾರುಕಟ್ಟೆಯನ್ನು ನಿರ್ಮಿಸಿಕೊಡುವಂತೆ ಸ್ಥಳೀಯಾಡಳಿತ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸೂಕ್ತ ಮಾರುಕಟ್ಟೆ ನಿರ್ಮಿಸಲು ಮುಂದಾಗಿಲ್ಲ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.
ಮಂಗಳೂರು ಹಾಗೂ ಮಲ್ಪೆಯಿಂದ ಮೀನು ತಂದು ದಿನದ 10ರಿಂದ16 ಗಂಟೆಯವರೆಗೆ ದುಡಿದು ತನ್ನ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದೇವೆ. ಮೀನು ಮಾರಾಟಗಾರರಲ್ಲಿ ಹೆಚ್ಚಿನವರು ಬಡ, ಮಧ್ಯಮ ವರ್ಗದವರಾಗಿದ್ದು, ಇದೀಗ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ತೆರವಿಗೆ ಮುಂದಾಗಿರುವುದು ವ್ಯಾಪಾರಸ್ಥರನ್ನು ಆತಂಕಕ್ಕೀಡು ಮಾಡಿದೆ ಎಂದು ವ್ಯಾಪರಸ್ಥರು ತಮ್ಮ ಅಳಲನ್ನು ತೋಡಿಕೊಂಡರು.
ಇಲ್ಲಿನ ಮೀನು ವ್ಯಾಪಾರಿಗಳಿಗೆ ಸರಿಯಾದ ಮಾರುಕಟ್ಟೆ ಜಾಗ ಇಲ್ಲದೆ ಹೆದ್ದಾರಿಯ ರಸ್ತೆ ಬದಿಯಲ್ಲಿಯೇ ಹಲವು ವರ್ಷಗಳಿಂದ ಮೀನು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ, ಇಲ್ಲಿಯವೆರೆಗೂ ಸ್ಥಳೀಯಾಡಳಿತ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಇದೀಗ ರೈಲ್ವೇ ಇಲಾಖೆಯು ತೆರವುಗೊಳಿಸಲು ಮುಂದಾಗಿದ್ದು, ಇದರಿಂದ ಹಲವು ವರ್ಷಗಳಿಂದ ರಸ್ತೆ ಬದಿ ಮೀನು ಮಾರಾಟ ಮಾಡುತ್ತಿದ್ದ ಮೀನುಗಾರರ ಬದುಕು ಈಗ ಅತಂತ್ರವಾಗಿದೆ. ಜಿಲ್ಲಾಡಳಿತ ಮೀನುಗಾರರ ಬೇಡಿಕೆಗೆ ಸ್ಪಂದಿಸಿ, ನಗರದಲ್ಲಿ ಸುಸಜ್ಜಿತವಾದ ಮೀನು ಮಾರಾಟ ಮಾರುಕಟ್ಟೆಗೆ ಸ್ಥಳ ಗುರುತಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂಬುವುದು ವ್ಯಾಪಾರಸ್ಥರ ಒತ್ತಾಯ.
''ಮೀನು ಮಾರುಕಟ್ಟೆ ಮತ್ತು ಗೂಡಂಗಡಿಗಳನ್ನು ತೆರವುಗೊಳಿಸಲು ಕಾಲಾವಕಾಶಕ್ಕಾಗಿ ಪುದು ಗ್ರಾಮಪಂ ವತಿಯಿಂದ ರೈಲ್ವೇ ಇಲಾಖೆಯ ಅಧಿಕಾರಿಗಳೊಂದಿಗೆ ಪರ್ಯಾಯ ವ್ಯವಸ್ಥೆ ಮಾಡುವವರೆಗೂ ಅವಕಾಶ ನೀಡಬೇಕೆಂದು ಸಮಾಲೋಚನೆ ನಡೆಸಿದ್ದು ನಮ್ಮ ಬೇಡಿಕೆಗೆ ಸ್ಪಂದಿಸಿ ಅಧಿಕಾರಿಗಳು ನಿಗದಿತ ಕಾಲಾವಕಾಶ ನೀಡಿದ್ದಾರೆ. ಫರಂಗಿಪೇಟೆಯಲ್ಲಿ ಮೀನು ಮಾರುಕಟ್ಟೆಗೆ ಸೂಕ್ತವಾದ ಸ್ಥಳವನ್ನು ಸರ್ವೇ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ''
- ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್
''ಸಾರ್ವಜನಿಕರಿಗೆ ಮೀನು ಮಾರುಕಟ್ಟೆ ಅಗತ್ಯವಿದ್ದು ಈಗಾಗಲೇ ಇರುವ ಫರಂಗಿಪೇಟೆ ಮೀನು ಮಾರುಕಟ್ಟೆ ಹಾಗೂ ಇನ್ನಿತರ ಅಂಗಡಿಗಳ ವ್ಯಾಪಾರದಿಂದ ಹಲವು ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಇದು ರೈಲ್ವೇ ಇಲಾಖೆಗೊಳಪಟ್ಟಿದ್ದರಿಂದ ಸ್ಥಳೀಯಾಡಳಿತ ಪರ್ಯಾಯ ಶಾಶ್ವತ ವ್ಯವಸ್ಥೆ ಮಾಡಬೇಕು, ನಾವು ವಿವಿಧ ಏಳು ಇಲಾಖೆಗಳಿಂದ ನಿರಕ್ಷೆಪನಾ ಪ್ರಮಾಣ ಪತ್ರ ತೆಗೆದು ಗಣೇಶೋತ್ಸವ ಇದೇ ಸ್ಥಳದಲ್ಲಿ ಮಾಡುತ್ತಿದ್ದೇವು ಆದರೆ ಈ ಸ್ಥಳದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿಗಾಗಿ ಅಷ್ಟೇ ಕಷ್ಟ ಅನುಭವಿಸುತ್ತಿದ್ದೆವು''
- ಕ್ರಷ್ಣ ಕುಮಾರ್ ಪೂಂಜ, ಸೇವಾಂಜಲಿ ಪ್ರತಿಷ್ಟಾನ ಟ್ಪಸ್ಟಿ
''ನಾಗರಿಕರ ಅನೂಕಲತೆಗಾಗಿ ಮೀನು ಮಾರುಕಟ್ಟೆ ಅಗತ್ಯವಾಗಿದ್ದು ಹಲವು ವರ್ಷಗಳಿಂದ ಇಲ್ಲಿಯ ಬಡವರು ಮೀನು ವ್ಯಪಾರ ಹಾಗೂ ಗೂಡಂಗಡಿ ಗಳನ್ನಿಟ್ಟು ವ್ಯಪಾರ ಮಾಡುತ್ತಿದ್ದು ಹಲವು ಕುಟುಂಬದ ಜೀವನ ನಿರ್ವಹಣೆ ಅವಲಂಬಿತವಾಗಿವೆ. ಮೀನು ಮಾರುಕಟ್ಟೆ ತೆರವಿನಲ್ಲಿ ಕಾಣದ ಕೈಗಳ ರಾಜಕೀಯ ದುರುದ್ದೇಶ ಅಡಗಿದೆ ಎಂಬುವುದು ಸಂಶಯವಿದೆ''
-ಸಲೀಮ್ ಕುಂಪನಮಜಲ್, ಪ್ರಧಾನ ಕಾರ್ಯದರ್ಶಿ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಬಂಟ್ವಾಳ
''ಇಲ್ಲಿ ನಾವು ಹಲವು ವರ್ಷಗಳಿಂದ ಮೀನು ವ್ಯಪಾರ ಮಾಡುತ್ತಿದ್ದು ರೈಲ್ವೇ ಇಲಾಖಾಧಿಕಾರಿಗಳು ನಮ್ಮನ್ನು ತೆರವುಗೊಳಿಸಲು ಬಲವಂತಪಡಿಸುತ್ತಿದ್ದು ನಮ್ಮನ್ನು ಬೀದಿಗೆ ತಳ್ಳುವ ವ್ಯವಸ್ಥಿತ ಕುಮ್ಮಕ್ಕು ಮತ್ತು ರಾಜಕೀಯ ದುರುದ್ದೇಶ ಇದರಲ್ಲಿ ಅಡಗಿದೆ.
- ಮೀನು ವ್ಯಪಾರಸ್ಥ, ಹನೀಫ್ ಕುಂಪನಮಜಲ್