ಮೈಸೂರು: ಜಿ.ಪಂ ಅಧ್ಯಕ್ಷ ಸ್ಥಾನಕ್ಕೆ ನಯೀಮಾ ಸುಲ್ತಾನ್ ದಿಢೀರ್ ರಾಜೀನಾಮೆ

ಮೈಸೂರು,ಡಿ.21: ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ನಯೀಮಾ ಸುಲ್ತಾನ್ ನಜೀರ್ ಅಹ್ಮದ್ ಅವರು ಇಂದು ದಿಢೀರನೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಒತ್ತಾಯದ ಮೇರೆಗೆ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ದಿಢೀರ್ ರಾಜಕೀಯ ಬದಲಾವಣೆ ಉಂಟಾಗಿದ್ದು, ಈಗಾಗಲೇ ಅಧ್ಯಕ್ಷರು ಉಪಾಧ್ಯಕ್ಷ ನಟರಾಜ್ ಅವರ ಬಳಿ ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆ. ನನ್ನ ಸ್ವಇಚ್ಛೆಯಿಂದ ಅಧ್ಯಕ್ಷರ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದು, ನನ್ನ ರಾಜೀನಾಮೆಯನ್ನು ಅಂಗೀಕರಿಸಲು ಕೋರುತ್ತೇನೆ ಎಂದು ಬರೆದಿದ್ದಾರೆ.
ರಾಜೀನಾಮೆ ನೀಡುವ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಬೀರಿಹುಂಡಿ ಬಸವಣ್ಣ ಮತ್ತು ನಯೀಮಾ ಪುತ್ರ ರೆಹಮಾನ್ ರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಜಿಪಂ ಸದಸ್ಯರ ನಡವಳಿಕೆ ಗೊಂದಲದ ಗೂಡಾಗಿದ್ದು, ಅತ್ತ ಸಾಮಾನ್ಯ ಸಭೆಗಾಗಿ ಕಾಂಗ್ರೆಸ್ ಸದಸ್ಯರು ಕಾದು ಕುಳಿತಿದ್ದರು. ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ಜಿಪಂ ಸದಸ್ಯರ ನಡುವೆ ಶೀತಲ ಸಮರ ಮುಂದುವರೆದಂತಾಗಿದೆ.
ಉಪಾಧ್ಯಕ್ಷರಾದ ಬಿ.ಎಂ.ನಟರಾಜ್ ಅವರೂ ಕೂಡ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ಕೇಳಿ ಬಂದಿದ್ದು, ಅವರು ಬೆಂಗಳೂರಿಗೆ ತೆರಳಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಈ ಕುರಿತು ನಯೀಮಾ ಸುಲ್ತಾನ್ ನಜೀರ್ ಅಹ್ಮದ್ ಅವರ ಪುತ್ರ ರೆಹ್ಮಾನ್ ಮಾತನಾಡಿ, ನನ್ನ ತಾಯಿಗೆ ರಾಜೀನಾಮೆ ನೀಡುವಂತೆ ಸ್ಥಳೀಯ ಪ್ರಭಾವಿ ವ್ಯಕ್ತಿಗಳಿಂದ ಒತ್ತಡವಿತ್ತು. ಅದಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಇನ್ನೂ ಒತ್ತಡ ಹೆಚ್ಚಿದಲ್ಲಿ ಮುಂದಿನ ದಿನಗಳಲ್ಲಿ ಅವರು ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ ಎಂದರು.







