ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ನೌಕರರ ಧರಣಿ

ಮೈಸೂರು,ಡಿ.21: ವೇತನ ಪರಿಷ್ಕರಣೆ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಿಲೀನವನ್ನು ವಿರೋಧಿಸಿ ಅಖಿಲ ಭಾರತ ಬ್ಯಾಕ್ ಅಧಿಕಾರಿಗಳ ಒಕ್ಕೂಟ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಯೂ ಬ್ಯಾಂಕ್ ಸಿಬ್ಬಂದಿಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.
ಮುಷ್ಕರ ನಿರತ ಬ್ಯಾಂಕ್ ಸಿಬ್ಬಂದಿಗಳು ಮಾತನಾಡಿ, ಸಾರ್ವಜನಿಕ ವಲಯ ಬ್ಯಾಂಕುಗಳನ್ನು ವಿಲೀನಕ್ಕೆ ವಿರೋಧವಿದೆ. ರನ್ನಿಂಗ್ ಸ್ಕೇಲ್ ಆಫ್ ಪೇ ನೀಡಿ. ಲಾಭದಾಯಕ ಅಥವಾ ಪಾವತಿಸುವ ಸಾಮರ್ಥ್ಯದೊಂದಿಗೆ ಥಳುಕು ಹಾಕದೇ ಕನಿಷ್ಠ ವೇತನ ಸೂತ್ರದಲ್ಲಿ ವೇತನ ಪರಿಷ್ಕರಣೆ ಮಾಡಿ. ಯಾವ ಷರತ್ತೂ ಇಲ್ಲದೇ ಶ್ರೇಣಿ 1 ರಿಂದ ಶ್ರೇಣಿ 7ರವರೆಗಿನ ಎಲ್ಲಾ ಅಧಿಕಾರಿಗಳನ್ನು ಒಳಗೊಂಡ ಹಾಗೆ ಎಲ್ಲಾ ಬ್ಯಾಂಕುಗಳ ಮ್ಯಾಂಡೇಟ್ ಕೊಡಬೇಕು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿರುವಂತೆ ಎಲ್ಲಾ ಬ್ಯಾಂಕ್ ಗಳ ಅಧಿಕಾರಿಗಳಿಗೆ ವೈದ್ಯಕೀಯ ವಿಮಾ ಯೋಜನೆ ನೀಡಿ ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿ ಮುಷ್ಕರ ನಡೆಸುತ್ತಿದ್ದೇವೆ ಎಂದರು. ಬಹುತೇಕ ಬ್ಯಾಂಕ್ ಗಳೆಲ್ಲ ಮುಚ್ಚಿದ್ದು, ಸಿಬ್ಬಂದಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಮುಷ್ಕರದಲ್ಲಿ ಸೋಮಶೇಖರ್, ಶಿವಕುಮಾರ್, ಧನಂಜಯ, ಮಂಜುನಾಥ್, ಕಾಳಯ್ಯ, ಮಹೇಶ್ ಸೇರಿದಂತೆ ಹಲವರ ಭಾಗವಹಿಸಿದ್ದರು.





