ಚೀನಾದಿಂದ ಜಗತ್ತಿನಾದ್ಯಂತ ಸೈಬರ್ ದಾಳಿ: ಬ್ರಿಟನ್

ಲಂಡನ್, ಡಿ. 21: ಚೀನಾವು ಏಶ್ಯ, ಯುರೋಪ್ ಮತ್ತು ಅಮೆರಿಕಗಳ ವ್ಯಾಪಾರ ರಹಸ್ಯಗಳನ್ನು ಗುರಿಯಾಗಿಸಿ ಭಾರೀ ಪ್ರಮಾಣದಲ್ಲಿ ಸೈಬರ್ ದಾಳಿ ನಡೆಸುತ್ತಿದೆ ಎಂದು ಬ್ರಿಟನ್‌ನ ತೆರೇಸಾ ಮೇ ಸರಕಾರ ಗುರುವಾರ ಆರೋಪಿಸಿದೆ.
ಸೈಬರ್ ದಾಳಿಗೆ ಚೀನಾ ಸರಕಾರದ ಏಜಂಟರು ಕಾರಣ ಎಂಬುದಾಗಿ ಬ್ರಿಟನ್ ಸರಕಾರ ಸಾರ್ವಜನಿಕವಾಗಿ ಹೇಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ವಿವಿಧ ದೇಶಗಳ ಬೌದ್ಧಿಕ ಆಸ್ತಿ ಮತ್ತು ಸೂಕ್ಷ್ಮ ವಾಣಿಜ್ಯ ಮಾಹಿತಿಗಳನ್ನು ಗುರಿಯಾಗಿಸಿ ‘ಎಪಿಟಿ 10’ ಎಂಬ ಗುಂಪೊಂದು ದುರುದ್ದೇಶಪೂರಿತ ಸೈಬರ್ ದಾಳಿ ನಡೆಸುತ್ತಿದೆ ಎಂದು ಬ್ರಿಟನ್ ವಿದೇಶ ಕಚೇರಿ ತಿಳಿಸಿದೆ.
ಈ ‘ಎಪಿಟಿ 10’ ಚೀನಾದ ಸರಕಾರಿ ಭದ್ರತೆ ಸಚಿವಾಲಯದ ಪರವಾಗಿ ಕೆಲಸ ಮಾಡುತ್ತಿದೆ.
‘‘ಈ ಸೈಬರ್ ದಾಳಿಯು ಈವರೆಗೆ ಪತ್ತೆಹಚ್ಚಲಾದ, ಬ್ರಿಟನ್ ಮತ್ತು ಅದರ ಮಿತ್ರರ ವಿರುದ್ಧ ನಡೆದ ಸೈಬರ್ ದಾಳಿಗಳಲ್ಲೇ ಅತ್ಯಂತ ಪ್ರಬಲ ದಾಳಿಯಾಗಿದೆ. ವ್ಯಾಪಾರ ರಹಸ್ಯಗಳು ಮತ್ತು ಜಾಗತಿಕ ಆರ್ಥಿಕತೆಗಳನ್ನು ಗುರಿಯಾಗಿಸಿ ನಡೆದ ದಾಳಿಗಳು ಇದಾಗಿವೆ’’ ಎಂದು ವಿದೇಶ ಕಾರ್ಯದರ್ಶಿ ಜೆರೆಮಿ ಹಂಟ್ ಹೇಳಿದರು.





