ಮಂಗಳನ ನೆಲದಲ್ಲಿ ಮೊದಲ ಉಪಕರಣವನ್ನು ಇಳಿಸಿದ ‘ಇನ್‌ಸೈಟ್’

ವಾಶಿಂಗ್ಟನ್, ಡಿ. 21: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಮಂಗಳ ಗ್ರಹ ಶೋಧಕ ನೌಕೆ ‘ಇನ್‌ಸೈಟ್’ ತನ್ನ ಮೊದಲ ಉಪಕರಣವನ್ನು ಮಂಗಳ ಗ್ರಹದ ಮೇಲ್ಮೈಯಲ್ಲಿ ಇರಿಸಿದೆ ಎಂದು ‘ನಾಸಾ’ ತಿಳಿಸಿದೆ.
ಇದರೊಂದಿಗೆ ಈ ಮಂಗಳ ಯೋಜನೆಯ ಮಹತ್ವದ ಉದ್ದೇಶವೊಂದು ಈಡೇರಿದಂತಾಗಿದೆ. ಈ ಉಪಕರಣದ ಮೂಲಕ ಮಂಗಳ ಗ್ರಹದ ನೆಲದ ಚಲನೆಯನ್ನು ಅಧ್ಯಯನ ಮಾಡಿ ಅದರ ಒಳಭಾಗದ ರಚನೆಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
‘ಸೀಸ್ಮೋಮೀಟರ್’ ಮಂಗಳನ ನೆಲದಲ್ಲಿ ಇರುವುದನ್ನು ಹೊಸ ಚಿತ್ರಗಳು ತೋರಿಸಿವೆ. ಅದರ ತಾಮ್ರ ಬಣ್ಣದ ಹೊದಿಕೆಯು ಮಂಗಳ ಗ್ರಹದ ಸಂಜೆಯ ಮಬ್ಬಿನಲ್ಲಿ ಮಸುಕಾಗಿ ಗೋಚರಿಸುತ್ತಿದೆ ಎಂದು ‘ನಾಸಾ’ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಇನ್‌ಸೈಟ್‌ನ ಕಾರ್ಯಗಳ ವೇಳಾಪಟ್ಟಿಯು ನಾವು ಭಾವಿಸಿರುವುದಕ್ಕಿಂತಲೂ ಚೆನ್ನಾಗಿ ನಡೆಯುತ್ತಿದೆ’’ ಎಂದು ಇನ್‌ಸೈಟ್ ಪ್ರಾಜೆಕ್ಟ್ ಮ್ಯಾನೇಜರ್ ಟಾಮ್ ಹಾಫ್‌ಮನ್ ಹೇಳುತ್ತಾರೆ.
‘‘ಸೀಸ್ಮೋಮೀಟರನ್ನು ಸುರಕ್ಷಿತವಾಗಿ ಮಂಗಳನ ನೆಲದಲ್ಲಿ ಇರಿಸಿರುವುದು ಅದ್ಭುತ ಕ್ರಿಸ್ ಮಸ್ ಉಡುಗೊರೆಯಾಗಿದೆ’’ ಎಂದು ಹಾಫ್‌ಮನ್ ನುಡಿದರು.
Next Story





