ಶೀಘ್ರದಲ್ಲೇ ಪುಟಿನ್ ಮರು ಮದುವೆ ?

ಮಾಸ್ಕೋ, ಡಿ. 21: ಬಹುಷಃ ನಾನು ಇನ್ನೊಂದು ಮದುವೆಯಾಗಬಹುದು ಎಂಬುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಹೇಳಿದ್ದಾರೆ. ಆದರೆ, ಯಾರನ್ನು ಮದುವೆಯಾಗುತ್ತೇನೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
66 ವರ್ಷದ ಪುಟಿನ್, ವರ್ಷಕ್ಕೊಮ್ಮೆ ನಡೆಸುವ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಿದ್ದರು.
ಈ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಮುಖ್ಯವಾಗಿ ಅಂತಾರ್ ರಾಷ್ಟ್ರೀಯ ಸಂಬಂಧಗಳು ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
‘‘ಓರ್ವ ಗೌರವಾನ್ವಿತ ವ್ಯಕ್ತಿಯಾಗಿ, ಒಂದಲ್ಲ ಒಂದು ದಿನ ನಾನು ಇದನ್ನು ಮಾಡಬೇಕಾಗುತ್ತದೆ’’ ಎಂದು ಪುಟಿನ್ ಮುಗುಳು ನಗುತ್ತಾ ಹೇಳಿದರು.
ಪುಟಿನ್ 1983ರಲ್ಲಿ ಲ್ಯುಡ್ಮಿಲಾ ಪುಟಿನಾ ಎಂಬವರನ್ನು ಮದುವೆಯಾಗಿದ್ದರು. ಅವರು ವಿಚ್ಛೇದನೆ ಹೊಂದಿದ್ದಾರೆ ಎಂಬುದನ್ನು 2013ರಲ್ಲಿ ಘೋಷಿಸಲಾಗಿತ್ತು.
ಅವರ ಇಬ್ಬರು ಪುತ್ರಿಯರು ರಾಜಕೀಯದಲ್ಲಿ ತೊಡಗಿಸಿಕೊಂಡಿಲ್ಲ. ಅವರು ಪ್ರಚಾರದಿಂದ ದೂರವೇ ಉಳಿದಿದ್ದಾರೆ.
ಮಾಜಿ ಒಲಿಂಪಿಕ್ ಜಿಮ್ನಾಸ್ಟಿಕ್ ಪಟು ಅಲೀನಾ ಕಬೇವ ಜೊತೆ ಪುಟಿನ್ ಸಂಬಂಧ ಹೊಂದಿದ್ದಾರೆ ಎಂಬುದಾಗಿ ರಶ್ಯದ ಪತ್ರಿಕೆಯೊಂದು ವರದಿ ಮಾಡಿತ್ತು. ಆದರೆ, ಅದನ್ನು ಪುಟಿನ್ ನಿರಾಕರಿಸಿದ್ದರು.







