ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧ ಬರೆಯುವ ಸಾಮರ್ಥ್ಯ ರೂಢಿಸಿಕೊಳ್ಳಲಿ: ಬೆಂವಿವಿ ಕುಲಪತಿ ವೇಣುಗೋಪಾಲ್
ಬೆಂಗಳೂರು, ಡಿ.21: ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧ ಬರೆಯುವಂತಹ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ವೇಣುಗೋಪಾಲ್ ಆಶಿಸಿದರು.
ಬೆಂವಿವಿ ಯುಸಿಇ ಆಯೋಜಿಸಿದ್ದ 14ನೆ ಅಂತರ್‌ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಂಶೋಧನ ಪ್ರಬಂಧ ಬರೆಯುವುದನ್ನು ರೂಢಿಸಿಕೊಂಡರೆ ವಿವಿಧ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಸಮಾಜದಲ್ಲಿರುವ ಒಳ್ಳೆಯದನ್ನು ಗುರುತಿಸುವ ಕಾರ್ಯವಾಗಬೇಕು. ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಅಧಿಕ ಸಾಮರ್ಥ್ಯವಿದೆಯಾದರೂ, ಆತ್ಮವಿಶ್ವಾಸದ ಕೊರತೆಯಿದೆ. ಅದನ್ನು ಭರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಸಾಗುವಂತಾಗಬೇಕೆಂದರು. ಈ ಮೊದಲು ಎಲ್ಲ ದೇಶಗಳು ಭಾರತದತ್ತ ನೋಡುತ್ತಿದ್ದವು. ಆದರೆ ಪ್ರಸ್ತುತ ಭಾರತೀಯರೇ ಬೇರೆ ಬೇರೆ ದೇಶಗಳ ಅನ್ವೇಷಣೆ, ಸಂಶೋಧನೆಗಳನ್ನು ನೋಡಿ ಬದುಕುವಂತ ಪರಿಸ್ಥಿತಿ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ವಿಷಾದಿಸಿದರು.
ಈ ಹಿನ್ನೆಲೆಯಲ್ಲಿ ದೇಶದ ಯುವಜನಾಂಗ ತಮ್ಮ ಕರ್ತವ್ಯ ಅರಿತು ಅಧ್ಯಯನ, ಉನ್ನತ ಸಂಶೋಧನೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು. ಯುಸಿಇಯ ಪ್ರಾಂಶುಪಾಲರಾದ ಡಾ.ಎಚ್.ಎನ್.ರಮೇಶ್, ಕಾರ್ಯಾಧ್ಯಕ್ಷ ಡಾ.ಚಂಪಾ ಎಚ್.ಎನ್, ಡಾ.ಪಿ.ದೀಪಾ ಶೆಣೈ ಮತ್ತಿತರರು ಉಪಸ್ಥಿತರಿದ್ದರು.





