ಡಿ.30ಕ್ಕೆ ಬುಡುಬುಡುಕೆ ಸಮುದಾಯದ ರಾಜ್ಯ ಮಟ್ಟದ ಪ್ರತಿಭಟನೆ
ಬೆಂಗಳೂರು, ಡಿ.21: ಗೋಂಧಳಿ, ಬುಡುಬುಡುಕೆ ಸಮುದಾಯದವರನ್ನು ಅವಮಾನಿಸುವವರ ವಿರುದ್ಧ ರಾಜ್ಯ ಮಟ್ಟದ ಪ್ರತಿಭಟನೆಯನ್ನು ಡಿ.30ರಂದು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಂಡ ಕರ್ನಾಟಕ ಗೋಂಧಳಿ ಸಮಾಜ ಸಂಘ ಮತ್ತು ಸಲಹಾ ಸಮಿತಿ ಅಧ್ಯಕ್ಷ ಡಾ.ಕೆ.ಎಂ. ಜಯರಾಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಬ್ಲಿಕ್ ಟಿವಿಯಲ್ಲಿ ಬುಡಬುಡಿಕೆ ಸಮುದಾಯದವರನ್ನು ಅವಮಾನಿಸಿದ್ದು, ಈ ಸಮಾಜದವರ ತಾಳ್ಮೆಯ ಕಟ್ಟೆ ಒಡೆದಿರುವ ಪರಿಣಾಮ ರಾಜ್ಯಾದ್ಯಂತ ಗೋಂಧಳಿ ಬುಡುಬುಡಕೆ, ಜೋಷಿ, ವಾಸುದೇವ ಸಮುದಾಯದವರು ಧರಣಿಯಲ್ಲಿ ಪಾಲ್ಗೊಂಡು ಬಹಳ ವರ್ಷಗಳಿಂದ ಆಗುತ್ತಿರುವ ಅವಮಾನದ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಪ್ರತಿನಿತ್ಯ ಈ ಸಮುದಾಯದವರಿಗೆ ಆಗುತ್ತಿರುವ ಅವಮಾನದ ವಿರುದ್ಧ ಪ್ರತಿರೋಧವನ್ನು ತೋರಬೇಕಾಗಿದೆ. ಬಸವಣ್ಣನವರು 12ನೇ ಶತಮಾನದಲ್ಲೇ ಜಾತಿಭೇದ, ವರ್ಣಭೇದ, ವರ್ಗಭೇದ ಹಾಗೂ ಕಾಯಕ ಭೇದಗಳಿಲ್ಲದ ಹೊಸ ಸಮಾಜವನ್ನು ನಿರ್ಮಿಸುವಲ್ಲಿ ಪ್ರಾಮಾಣಿಕ ಪ್ರಯತ್ನಪಟ್ಟರು, ವೃತ್ತಿಯ ಮೂಲಕ ಬಂದ ಜಾತಿ ಪದ್ಧತಿಯು ಅಸಮಾನತೆಯ ಹಾದಿಯನ್ನು ಹಿಡಿಸಿದೆ ಅವರು ಎಂದು ಬೇಸರ ವ್ಯಕ್ತಪಡಿಸಿದರು.





