ಮಂಗಳೂರು: ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರು ಆರೋಪಿಗಳು ವಶಕ್ಕೆ

ಮಂಗಳೂರು, ಡಿ.21: ನಗರದ ಹೊರವಲಯ ತೋಟಬೆಂಗ್ರೆ ಬಳಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಮೊಗವೀರಪಟ್ನ ನಿವಾಸಿ ವಿಜಿತ್ ಯಾನೆ ಶಿವರಾಜ್‌ಕುಮಾರ್ (26) ಮತ್ತು ತೋಟಬೆಂಗ್ರೆ ನಿವಾಸಿ ಶ್ರಾವಣ್ ಯಾನೆ ಚಾನು (24) ಬಂಧಿತ ಆರೋಪಿಗಳು.
ಡಿ.19ರಂದು ರಾತ್ರಿ 2:30ರ ವೇಳೆಗೆ ಪಣಂಬೂರು ಠಾಣಾ ಸಿಬ್ಬಂದಿ ಗಸ್ತಿನಲ್ಲಿದ್ದು ತೋಟಬೆಂಗ್ರೆಯ ಸರಕಾರಿ ಶಾಲೆಯ ಬಳಿ ತಲುಪಿದಾಗ ಆರೋಪಿಗಳಾದ ವಿಜೀತ್, ರಮೀತ್, ಶ್ರಾವಣ್, ಆಕಾಶ್ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆಯೊಡ್ಡಿ, ಸಮವಸ್ತ್ರದಲ್ಲಿದ್ದವರ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಂಗ ಬಂಧನ: ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ವಿಜಿತ್ ಮತ್ತು ಶ್ರಾವಣ್ ಎಂಬ ಆರೋಪಿಗಳನ್ನು ಡಿ.21ರಂದು ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹದಳದ ಸಿಬ್ಬಂದಿ ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ದಸ್ತಗಿರಿಯಾದ ವಿಜಿತ್ ವಿರುದ್ಧ ಪಣಂಬೂರು ಠಾಣೆಯಲ್ಲಿ ಈಗಾಗಲೇ ರೌಡಿಶೀಟರ್ ತೆರೆಯಲಾಗಿದ್ದು, ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ. ಶ್ರಾವಣ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣ ದಾಖಲಾಗಿವೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಂ.ಮಂಜುನಾಥ ಶೆಟ್ಟಿ ಇವರ ಮಾರ್ಗದರ್ಶನದಂತೆ ಪಣಂಬೂರು ಠಾಣಾ ಪಿಎಸ್ಸೈ ಉಮೇಶ್ ಕುಮಾರ್ ಎಂ.ಎನ್. ಹಾಗೂ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.