ಪ.ಬಂಗಾಳದಲ್ಲಿ ಬಿಜೆಪಿಯ ರಥಯಾತ್ರೆಗಳಿಗೆ ಅನುಮತಿ ನೀಡಿದ್ದ ಹೈಕೋರ್ಟ್ ಆದೇಶ ರದ್ದು
ಸಾಂದರ್ಭಿಕ ಚಿತ್ರ
ಕೋಲ್ಕತಾ,ಡಿ.21: ಮುಂದಿನ ವರ್ಷದ ಲೋಕಸಭಾ ಚುನಾವಣೆಗಳಿಗೆ ಮುನ್ನ ಪಶ್ಚಿಮ ಬಂಗಾಳದಲ್ಲಿ ಮೂರು ‘ಪ್ರಜಾಪ್ರಭುತ್ವ ರಕ್ಷಿಸಿ’ ರಥಯಾತ್ರೆಗಳನ್ನು ನಡೆಸಲು ಕಲ್ಕತ್ತಾ ಉಚ್ಚ ನ್ಯಾಯಾಲಯದ ಏಕ ನ್ಯಾಯಾಧೀಶ ಪೀಠವು ಗುರುವಾರ ನೀಡಿದ್ದ ಅನುಮತಿಯನ್ನು ಮುಖ್ಯ ನ್ಯಾಯಾಧೀಶರ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ ತಳ್ಳಿಹಾಕುವುದರೊಂದಿಗೆ ಬಿಜೆಪಿಗೆ ಭಾರೀ ಹಿನ್ನಡೆಯಂಟಾಗಿದೆ.
ರಥಯಾತ್ರೆಗಳು ರಾಜ್ಯದಲ್ಲಿ ಕೋಮು ಘರ್ಷಣೆಗಳಿಗೆ ಕಾರಣವಾಗಬಹುದು ಎಂಬ ಮಮತಾ ಬ್ಯಾನರ್ಜಿ ಸರಕಾರದ ವಾದವನ್ನು ಪುರಸ್ಕರಿಸಿದ್ದ ಹಿಂದಿನ ತೀರ್ಪನ್ನು ಏಕ ನ್ಯಾಯಾಧೀಶ ಪೀಠ ತಳ್ಳಿಹಾಕಿತ್ತು. ಈ ತೀರ್ಪಿನ ವಿರುದ್ಧ ಸರಕಾರವು ಮು.ನ್ಯಾ.ದೇಬಾಶಿಷ್ ಕರಗುಪ್ತಾ ಮತ್ತು ನ್ಯಾ.ಶಂಪಾ ಸರ್ಕಾರ್ ಅವರ ವಿಭಾಗೀಯ ಪೀಠಕ್ಕೆ ಮೇಲ್ಮನವಿಯನ್ನು ಸಲ್ಲಿಸಿತ್ತು. ಪ್ರಕರಣವು ‘ತುರ್ತು ಸ್ವರೂಪ’ದ್ದಾಗಿರುವುದರಿಂದ ತುರ್ತಾಗಿ ವಿಚಾರಣೆಯನ್ನು ನಡೆಸುವಂತೆ ಅದು ಕೋರಿತ್ತು.
ಪ್ರಕರಣವನ್ನು ಏಕ ನ್ಯಾಯಾಧೀಶ ಪೀಠಕ್ಕೆ ಮರಳಿಸಿರುವ ವಿಭಾಗೀಯ ಪೀಠವು,ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ರಾಜ್ಯ ಆಡಳಿತವು ಒದಗಿಸಿರುವ 36 ಗುಪ್ತಚರ ಮಾಹಿತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಸೂಚಿಸಿದೆ.