ಹನೂರು ವಿಷ ಪ್ರಸಾದ ದುರಂತ: ಆರೋಪಿ ಅಂಬಿಕಾ ಮನೆಯಲ್ಲಿ ಮಹಜರು

ಚಾಮರಾಜನಗರ/ಹನೂರು, ಡಿ.21: ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಪ್ರಸಾದಕ್ಕೆ ವಿಷ ಹಾಕಿರುವ ಪ್ರಕರಣದ ಆರೋಪಿ ಅಂಬಿಕಾಳನ್ನು ಪೊಲೀಸರು ಇಂದು ಸುಳ್ವಾಡಿ ಗ್ರಾಮದ ಆಕೆಯ ಮನೆಗೆ ಕರೆದುಕೊಂಡು ಬಂದು ಮಹಜರು ನಡೆಸಿದರು.
ಮನೆಯಲ್ಲಿ ಮಹಜರು ನಡೆಸಿದ ಬಳಿಕ ಹೊರ ಬರುತ್ತಿದ್ದಂತೆ ಮಾಧ್ಯಮದವರನ್ನು ನೋಡಿದ ಅಂಬಿಕಾ, ನಾನೇನು ಮಾಡಿಲ್ಲ. ನನ್ನ ವಿರುದ್ಧ ಪೊಲೀಸರು ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ಮನೆಯ ಕೀಯನ್ನು ನಕಲಿ ಮಾಡಿಸಿ ಪೊಲೀಸರು ರಾತ್ರೋ ರಾತ್ರಿ ಬಾಗಿಲು ತೆಗೆದು ವಿಷದ ಬಾಟಲ್ ಇಟ್ಟಿದ್ದಾರೆ ಎಂದು ಕಿರುಚಾಡಿದಳು. ಅಂಬಿಕಾಳನ್ನು ಮಹಜರಿಗೆ ಕರೆದುಕೊಂಡು ಬಂದ ಸುದ್ದಿ ತಿಳಿದು ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಮಹದೇವಸ್ವಾಮಿಯಿಂದ ಎದೆನೋವು ನಾಟಕ: ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಸಾದಕ್ಕೆ ವಿಷ ಬೆರೆಸಿದ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ‘ನನಗೆ ಎದೆ ನೋವು’ ಎಂದು ಸ್ವಾಮಿ ಹೇಳಿದ್ದು ಪೊಲೀಸರು ಸರಕಾರಿ ಆಸ್ಪತ್ರೆಯ ವೈದ್ಯರನ್ನು ಕರೆಯಿಸಿ ಪರೀಕ್ಷೆ ನಡೆಸಿದಾಗ ಆತನಿಗೆ ಯಾವುದೇ ತೊಂದರೆ ಇಲ್ಲದೆ ಆರೋಗ್ಯವಾಗಿದ್ದಾನೆ ಎಂದು ದೃಢಪಟ್ಟಿದೆ. ಸ್ವಾಮಿ ಸುಳ್ಳು ಹೇಳಿ ನಾಟಕವಾಡಿದ್ದಾಗಿ ತಿಳಿದು ಬಂದಿದೆ.







