ಭಾರತ ಮಹಿಳಾ ತಂಡ ಪ್ರಕಟ: ನಾಯಕತ್ವ ಉಳಿಸಿಕೊಂಡ ಮಿಥಾಲಿ, ಹರ್ಮನ್‌ಪ್ರೀತ್
ನ್ಯೂಝಿಲೆಂಡ್ ವಿರುದ್ಧ ಏಕದಿನ, ಟ್ವೆಂಟಿ-20 ಸರಣಿ

ಹೊಸದಿಲ್ಲಿ, ಡಿ.21: ಮುಂದಿನ ತಿಂಗಳು ಆರಂಭವಾಗಲಿರುವ ನ್ಯೂಝಿಲೆಂಡ್ ಕ್ರಿಕೆಟ್ ಪ್ರವಾಸಕ್ಕೆ ಭಾರತ ಮಹಿಳಾ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಮಿಥಾಲಿ ರಾಜ್ ಹಾಗೂ ಹರ್ಮನ್‌ಪ್ರೀತ್ ಕೌರ್ ಕ್ರಮವಾಗಿ ಏಕದಿನ ಹಾಗೂ ಟ್ವೆಂಟಿ-20 ತಂಡದಲ್ಲಿ ನಾಯಕಿ ಸ್ಥಾನ ಉಳಿಸಿಕೊಂಡಿದ್ದಾರೆ. ಫಾರ್ಮ್‌ನಲ್ಲಿಲ್ಲದ ವೇದಾ ಕೃಷ್ಣಮೂರ್ತಿಯನ್ನು ಎರಡೂ ತಂಡಗಳಿಂದ ಕೈಬಿಡಲಾಗಿದೆ.
ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ಗೆ ಪೂರ್ವಭಾವಿ ಯಾಗಿ ಭಾರತ ಜ.24ರಿಂದ ನ್ಯೂಝಿಲೆಂಡ್ ವಿರುದ್ಧ ತಲಾ 3 ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಯನ್ನು ಆಡಲಿದೆ. ಭಾರತ ಕಳೆದ ತಿಂಗಳು ವಿಶ್ವ ಟ್ವೆಂಟಿ-20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಶರಣಾದ ಬಳಿಕ ಇದೇ ಮೊದಲ ಬಾರಿ ಅಂತರ್‌ರಾಷ್ಟ್ರೀಯ ಸರಣಿ ಆಡುತ್ತಿದೆ. ಡಬ್ಲುವಿ ರಾಮನ್ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾದ ಮರುದಿನವೇ ಏಕದಿನ ಹಾಗೂ ಟ್ವೆಂಟಿ-20 ಸರಣಿಗೆ 15 ಸದಸ್ಯೆಯರನ್ನು ಒಳಗೊಂಡ ತಂಡ ಘೋಷಿಸಲಾಗಿದೆ.
ನ.30 ರಂದು ರಮೇಶ್ ಪೊವಾರ್ ಕೋಚ್ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಬಿಸಿಸಿಐ, ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಪೊವಾರ್ ಹಾಗೂ ಹರ್ಮನ್‌ಪ್ರೀತ್ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಿಂದ ಮಿಥಾಲಿ ರಾಜ್‌ರನ್ನು ಕೈಬಿಡುವ ಒಮ್ಮತದ ನಿರ್ಧಾರಕ್ಕೆ ಬಂದಿದ್ದರು. ಆದರೆ, ಈ ನಿರ್ಧಾರ ವಿವಾದಕ್ಕೆ ಕಾರಣವಾಗಿತ್ತು. ಹರ್ಮನ್‌ಪ್ರೀತ್ ಹಾಗೂ ಟ್ವೆಂಟಿ-20 ತಂಡದ ಉಪ ನಾಯಕಿ ಸ್ಮತಿ ಮಂಧಾನ ಪೊವಾರ್ ಬೆಂಬಲಕ್ಕೆ ನಿಲ್ಲುವುದರೊಂದಿಗೆ ಮಹಿಳಾ ತಂಡದಲ್ಲಿ ಭಿನ್ನಾಭಿಪ್ರಾಯ ಕಂಡುಬಂದಿತ್ತು. ಹರ್ಮನ್‌ಪ್ರೀತ್ ಹಾಗೂ ಮಿಥಾಲಿ ತಮ್ಮಾಳಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿದ್ದಾರೆ.
ಶುಕ್ರವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಮಿಥಾಲಿ ಹಾಜರಾಗಿದ್ದರು. ಆಸ್ಟ್ರೇಲಿಯದಲ್ಲಿ ವನಿತೆಯರ ಬಿಗ್ ಬ್ಯಾಶ್ ಟೂರ್ನಿಯಲ್ಲಿ ಭಾಗವಹಿಸಿರುವ ಕೌರ್ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು. ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಹಾಗೂ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಸಮ್ಮುಖದಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥೆ ಹೇಮಲತಾ ಕಾಲಾ ತಂಡವನ್ನು ಘೋಷಿಸಿದರು.
ಕಳಪೆ ಫಾರ್ಮ್‌ನಲ್ಲಿರುವ ಕನ್ನಡತಿ ವೇದಾರನ್ನು ಎರಡೂ ತಂಡಗಳಿಂದ ಕೈಬಿಡಲಾಗಿದೆ. ವೇದಾ ಬದಲಿಗೆ ಮೋನಾ ಮೆಶ್ರಮ್‌ರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಏಕದಿನ ತಂಡ
ಮಿಥಾಲಿ ರಾಜ್(ನಾಯಕಿ), ಪೂನಮ್ ರಾವತ್, ಸ್ಮತಿ ಮಂಧಾನ, ಜೆಮಿಮ್ಹಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ತಾನ್ಯಾ ಭಾಟಿಯಾ(ವಿಕೆಟ್‌ಕೀಪರ್), ಮೋನಾ ಮೆಶ್ರಮ್, ಏಕ್ತಾ ಬಿಶ್ತ್, ಮಾನ್ಸಿ ಜೋಶಿ, ದಯಾಲನ್ ಹೇಮಲತಾ, ಪೂನಮ್ ಯಾದವ್, ರಾಜೇಶ್ವರಿ ಗಾಯಕ್ವಾಡ್, ಜುಲನ್ ಗೋಸ್ವಾಮಿ, ಶಿಖಾ ಪಾಂಡೆ.
ಟಿ-20 ತಂಡ
ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮತಿ ಮಂಧಾನ(ಉಪ ನಾಯಕಿ), ಮಿಥಾಲಿ ರಾಜ್, ದೀಪ್ತಿ ಶರ್ಮಾ, ಜೆಮಿಮ್ಹಾ ರೋಡ್ರಿಗಸ್, ಅನುಜಾ ಪಾಟೀಲ್, ದಯಾಲನ್ ಹೇಮಲತಾ, ಮಾನ್ಸಿ ಜೋಶಿ, ಶಿಖಾ ಪಾಂಡೆ, ತಾನ್ಯಾ ಭಾಟಿಯಾ(ವಿಕೆಟ್‌ಕೀಪರ್), ಪೂನಮ್ ಯಾದವ್, ಏಕ್ತಾ ಬಿಶ್ತ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಪ್ರಿಯಾ ಪೂನಿಯಾ.







