2020ರ ಒಲಿಂಪಿಕ್ಸ್: ಪದಕದ ಮೇಲೆ ಬಜರಂಗ್ ಕಣ್ಣು

ಜಾರ್ಜಿಯಾ, ಡಿ.21: ಭಾರತದ ತಾರಾ ಕುಸ್ತಿಪಟು ಬಜರಂಗ್ ಪೂನಿಯ 2018ರ ಸಾಲಿನಲ್ಲಿ ಹಲವು ಟೂರ್ನಿಗಳಲ್ಲಿ ಜಯ ಸಾಧಿಸಿದ್ದು, 65 ಕೆ.ಜಿ. ಫ್ರ್ರೀಸ್ಟೈಲ್ ವಿಭಾಗದಲ್ಲಿ ಅಗ್ರ ಶ್ರೇಯಾಂಕದಲ್ಲಿದ್ದರು. ಇದೀಗ ಅವರು 2020ರ ಟೋಕಿಯೊ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿದ್ದು ಪದಕ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.
ಸದ್ಯ ಜಾರ್ಜಿಯಾದಲ್ಲಿ ತರಬೇತಿ ಪಡೆಯುತ್ತಿರುವ ಪೂನಿಯಾ, ‘‘ಎಲ್ಲ ಆಟಗಾರರಂತೆ ಒಲಿಂಪಿಕ್ಸ್ ಗೇಮ್ಸ್‌ಗಳಲ್ಲಿ ದೇಶಕ್ಕೆ ಪದಕ ಗೆದ್ದುಕೊಡುವುದು ನನ್ನ ಕನಸಾಗಿದೆ. ಅದಕ್ಕಾಗಿ ಶ್ರಮವಹಿಸುತ್ತಿರುವೆ. ವರ್ಷಪೂರ್ತಿ ನಾನು ನೀಡಿದ ಪ್ರದರ್ಶನ ಗಮನಿಸಿದರೆ ಸರಿಯಾದ ದಾರಿಯಲ್ಲಿ ಸಾಗುತ್ತಿದ್ದು, ಸಿದ್ಧತೆಗಳು ಸೂಕ್ತವಾಗಿ ಸಾಗುತ್ತಿವೆ ಎಂದೆನಿಸುತ್ತದೆ. 2020ರ ಒಲಿಂಪಿಕ್ಸ್ ನಲ್ಲಿ ಪದಕ ಜಯಿಸುವ ಸಲುವಾಗಿ ನನ್ನ ಉತ್ತಮ ಪ್ರದರ್ಶನವನ್ನು ಮುಂದುವರಿಸುತ್ತೇನೆ’’ ಎಂದು ಪೂನಿಯ ಹೇಳಿದ್ದಾರೆ. ನಾನು ಈಗ ಒಲಿಂಪಿಕ್ಸ್ ಗೆ ಅರ್ಹತಾ ವಿಭಾಗವಾಗಿರುವ 2019ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ಗಮನಹರಿಸಿದ್ದೇನೆ. ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಆಗಿರುವುದು ಒಳ್ಳೆಯ ವಿಚಾರವೇ. ಆದರೂ ಏಳು-ಬೀಳು ಕ್ರೀಡಾಪಟುವೊಬ್ಬನ ಜೀವನದ ಭಾಗವಾಗಿದೆ ಎಂಬುದನ್ನು ಮರೆಯಬಾರದು ಎಂದು ಪೂುನಿಯ ಮಾರ್ಮಿಕವಾಗಿ ನುಡಿದರು





