ಭಾರತ ಮಹಿಳಾ ತಂಡದ ಕೋಚ್ ಆಯ್ಕೆ ಅಸಾಂವಿಧಾನಿಕ: ಡಯಾನಾ ಎಡುಲ್ಜಿ

ಹೊಸದಿಲ್ಲಿ, ಡಿ.21: ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ಸುಪ್ರೀಂಕೋರ್ಟಿನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ಸದಸ್ಯರ ಮಧ್ಯೆ ತೀವ್ರ ಭಿನ್ನಾಭಿಪ್ರಾಯವಿದ್ದ ಹೊರತಾಗಿಯೂ ಡಬ್ಲುವಿ ರಾಮನ್‌ರನ್ನು ಗುರುವಾರ ಭಾರತ ಮಹಿಳಾ ತಂಡದ ಕೋಚ್ ಆಗಿ ನೇಮಿಸಲಾಗಿತ್ತು. ಇದೀಗ ಆಯ್ಕೆ ವಿಚಾರ ವಿಕೋಪಕ್ಕೆ ತಿರುಗಿದ್ದು, ಆಡಳಿತಾಧಿಕಾರಿ ಸಮಿತಿಯ ಸದಸ್ಯೆ ಡಯಾನಾ ಎಡುಲ್ಜಿ ಸಿಎಒ ಮುಖ್ಯಸ್ಥ ವಿನೋದ್ ರಾಯ್ ವಿರುದ್ಧ ಕಿಡಿಕಾರಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಡಬ್ಲುವಿ ರಾಮನ್ ಆಯ್ಕೆಯು ‘ಅಸಾಂವಿಧಾನಿಕ’ ಹಾಗೂ ‘ಕಾನೂನು ಬಾಹಿರ’ ಎಂದು ಹೇಳಿದ್ದಾರೆ. ‘‘ಮಹಿಳಾ ಕೋಚ್ ಆಯ್ಕೆ ಸಮಿತಿಯ ರಚನೆ ಒಂದು ಏಕಪಕ್ಷೀಯ ನಿರ್ಧಾರ ಮಾತ್ರವಲ್ಲ, ಅದೊಂದು ಅಸಾಂವಿಧಾನಿಕವಾಗಿತ್ತು’’ ಎಂದು ರಾಯ್‌ಗೆ ರವಾನಿಸಿರುವ ಇ-ಮೇಲ್‌ನಲ್ಲಿ ಎಡುಲ್ಜಿ ಆರೋಪಿಸಿದ್ದಾರೆ.
53ರ ಹರೆಯದ ರಾಮನ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸು ತ್ತಿದ್ದಾರೆ. ಕೋಚ್ ಆಯ್ಕೆ ಪ್ರಕ್ರಿಯೆ ನಿಲ್ಲಿಸುವಂತೆ ಎಡುಲ್ಜಿ ಅವರು ರಾಯ್‌ಗೆ ಒತ್ತಾಯಿಸಿದ್ದರು. ಬಿಸಿಸಿಐ ಖಜಾಂಚಿ ಅನಿರುದ್ಧ್ ಚೌಧರಿ ಕೂಡ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದರು. ರಾಯ್ ನಿರ್ಧಾರಕ್ಕೆ ಎಡುಲ್ಜಿ ವಿರೋಧವಿದೆ ಎಂದು ಚೌಧರಿ ಹೇಳಿದ್ದರು.
ನ್ಯೂಝಿಲೆಂಡ್ ಪ್ರವಾಸಕ್ಕಿಂತ ಮೊದಲು ಕೋಚ್ ಆಯ್ಕೆ ಅನಿವಾರ್ಯವಾಗಿತ್ತು ಎಂದಿರುವ ರಾಯ್,‘‘ಕೋಚ್‌ರಿಲ್ಲದೆ ಭಾರತ ಮಹಿಳಾ ತಂಡವನ್ನು ವಿದೇಶ ಪ್ರವಾಸಕ್ಕೆ ಕಳುಹಿಸುವುದು ಸರಿಯಲ್ಲ. ತಜ್ಞ ಆಯ್ಕೆ ಸಮಿತಿಯು ಅರ್ಹ ಅರ್ಜಿದಾರರ ಸಂದರ್ಶನ ನಡೆಸಿದೆ’’ ಎಂದರು. ಎಡುಲ್ಜಿ ಅವರು ಮುಂದಿನ ತಿಂಗಳು ನಡೆಯಲಿರುವ ನ್ಯೂಝಿಲೆಂಡ್ ಪ್ರವಾಸದ ತನಕ ರಮೇಶ್ ಪೊವಾರ್‌ರನ್ನು ಕೋಚ್ ಆಗಿ ಮುಂದುವರಿಸಲು ಬಯಸಿದ್ದರು. ಆದರೆ, ರಾಯ್ ಅವರು ನೂತನ ಕೋಚ್‌ಗೆ ಅರ್ಜಿ ಆಹ್ವಾನಿಸುವಂತೆ ಬಿಸಿಸಿಐಗೆ ಸೂಚಿಸಿದ್ದರು. ಪೊವಾರ್ ಅವರ ವಿವಾದಾತ್ಮಕ ಕೋಚ್ ಅವಧಿ ನ.30ಕ್ಕೆ ಕೊನೆಗೊಂಡಿತ್ತು. ಟ್ವೆಂಟಿ-20 ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಹಿರಿಯ ಆಟಗಾರ್ತಿ ಮಿಥಾಲಿ ರಾಜ್‌ರನ್ನು ಕೈಬಿಡುವುದರ ಹಿಂದೆ ಪೊವಾರ್ ಕೈವಾಡವಿತ್ತು.///////////////







