ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಹಾರ್ದಿಕ್ ಪಾಂಡ್ಯಗೆ ಅವಕಾಶ ನೀಡಿ: ಭಾರತಕ್ಕೆ ಹಸ್ಸಿ ಸಲಹೆ

ಮೆಲ್ಬೋರ್ನ್, ಡಿ.21: ‘‘ಮೂರನೇ ಟೆಸ್ಟ್ ಪಂದ್ಯ ನಡೆಯಲಿರುವ ಮೆಲ್ಬೋರ್ನ್ ನ ಪಿಚ್ ಪರ್ತ್‌ಗಿಂತ ತೀರಾ ಭಿನ್ನವಾಗಿದೆ. ಭಾರತ ತನ್ನ ಬೌಲಿಂಗ್ ದಾಳಿಯಲ್ಲಿ ಸಮತೋಲನ ತರಲು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳಬೇಕು’’ ಎಂದು ಆಸ್ಟ್ರೇಲಿಯದ ಮಾಜಿ ಬ್ಯಾಟ್ಸ್‌ಮನ್ ಮೈಕಲ್ ಹಸ್ಸಿ ಸಲಹೆ ನೀಡಿದ್ದಾರೆ.
ಮೂರನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ಡಿ.26 ರಿಂದ ಆರಂಭವಾಗಲಿದೆ. ಕಳೆದ ವರ್ಷ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸೀಸ್, ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿದ ಬಳಿಕ ಎಂಸಿಜಿ ಪಿಚ್‌ನತ್ತ ತೀವ್ರ ನಿಗಾವಹಿಸಲಾಗಿದೆ. ಎಂಸಿಜಿ ಮೈದಾನದ ಬಗ್ಗೆ ಐಸಿಸಿ ಎಚ್ಚರಿಕೆ ನೀಡಿತ್ತು. ‘‘ಪರ್ತ್ ಪಿಚ್ ಒಂದೇ ತೆರನಾಗಿದೆ. ಮೆಲ್ಬೋರ್ನ್ ಪಿಚ್ ಸಂಪೂರ್ಣ ಭಿನ್ನವಾಗಿದೆ. ಪ್ರಸ್ತುತ ಸರಣಿಯಲ್ಲಿ ಭಾರತದ ವೇಗದ ಬೌಲಿಂಗ್ ವಿಭಾಗ ಸೊಗಸಾದ ಪ್ರದರ್ಶನ ನೀಡಿದೆ. ಅಡಿಲೇಡ್ ಹಾಗೂ ಪರ್ತ್‌ನ ಉಷ್ಣತೆಯ ವಾತಾವರಣದಲ್ಲಿ ಸಾಕಷ್ಟು ಓವರ್‌ಗಳ ಬೌಲಿಂಗ್ ಮಾಡಿದೆ. ಆದರೆ, ಆಸ್ಟ್ರೇಲಿಯನ್ನರ ವಿಕೆಟ್ ಪಡೆಯಲು ಕಠಿಣ ಶ್ರಮದ ಅಗತ್ಯವಿದೆ’’ ಎಂದು ಹಸ್ಸಿ ಹೇಳಿದ್ದಾರೆ.
‘‘ಅವರು(ಪಾಂಡೆ)ಫಾರ್ಮ್‌ನಲ್ಲಿದ್ದರೆ ಸ್ವಲ್ಪ ಮಿಚೆಲ್ ಮಾರ್ಷ್‌ರನ್ನು ಹೋಲುತ್ತಾರೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಹೆಚ್ಚುವರಿ ಬೌಲಿಂಗ್ ಆಯ್ಕೆಯಿದ್ದರೆ ವೇಗದ ಬೌಲರ್‌ಗಳ ಕೆಲಸದ ಭಾರ ತಗ್ಗಿಸಬಹುದು. ಈ ತನಕ ಉಭಯ ತಂಡಗಳ ಬೌಲರ್‌ಗಳು ಕಠಿಣ ಶ್ರಮಪಟ್ಟಿದ್ದಾರೆ’’ ಎಂದು 2005 ಹಾಗೂ 2013ರ ತನಕ ಆಸೀಸ್ ಪರ 79 ಟೆಸ್ಟ್ ಪಂದ್ಯಗಳನ್ನಾಡಿ 6,235 ರನ್ ಕಲೆ ಹಾಕಿದ್ದ ಹಸ್ಸಿ ಅಭಿಪ್ರಾಯಪಟ್ಟರು.





