ಕಾರ್ಪೊರೇಟ್ ಅಪರಾಧದ ಬಗ್ಗೆ ಇರಲಿ ಎಚ್ಚರ: ಡಾ. ಸತಿನಾಥ್

ಮಂಗಳೂರು, ಡಿ.22: ಭೋಪಾಲ ಅನಿಲ ದುರಂತವು ದೇಶಕ್ಕೆ ಕಾರ್ಪೊರೇಟ್ ಅಪರಾಧದ ಬಗ್ಗೆ ಸಾಕಷ್ಟು ಪಾಠವನ್ನು ಕಲಿಸಿದೆ. ಇದರಿಂದ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಮತ್ತೊಂದು ದುರಂತಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದು ಭೋಪಾಲ ಅನಿಲ ದುರಂತ ಸಂತ್ರಸ್ತರ ಪರ ಹೋರಾಟಗಾರ ಡಾ.ಸತಿನಾಥ ಸಾರಂಗಿ ಎಚ್ಚರಿಸಿದ್ದಾರೆ.
ನಗರದ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಸಮಾಜಕಾರ್ಯ ವಿಭಾಗ ಮತ್ತು ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಸಹಕಾರದಲ್ಲಿ ಶನಿವಾರ ‘ರಾಸಾಯನಿಕ ಕೈಗಾರಿಕೆಗಳು ಮತ್ತು ಸಾರ್ವಜನಿಕ ಅಸಹಾಯಕತೆ-ಭೋಪಾಲದ ಅನುಭವ ಮತ್ತು ಪಾಠಗಳ’ ವಿಷಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಎಂಆರ್‌ಪಿಎಲ್ ಸಮೀಪದ ಪ್ರದೇಶಗಳಿಗೆ ನಿನ್ನೆ ಭೇಟಿ ನೀಡುವಾಗ ನನಗೆ ಭೋಪಾಲ ದುರಂತ ನೆನಪಾಯಿತು. ಇಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹಾಗಾರ ಇದೆ. ಅಲ್ಲಿನ ಸುತ್ತಮುತ್ತಲಿನ ಜಲಮೂಲಗಳನ್ನು ನೋಡಿದಾಗ ಈಗಾಗಲೇ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಸರಕಾರಿ ಇಲಾಖೆಗಳಿಂದ ಸಮಗ್ರ ಅಧ್ಯಯನ ನಡೆಸಬೇಕು. ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹೇಳಿದರು.
ಹಸಿರು ಕ್ರಾಂತಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆಯಾದರೂ ಇದು ಸಂಶ್ಲೇಷಿತ ರಾಸಾಯನಿಕಗಳ ಬಳಕೆಗೆ ಹೆಚ್ಚು ಪ್ರೋತ್ಸಾಹ ನೀಡಿರುವುದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಎರಡನೆ ಮಹಾಯುದ್ಧದ ಬಳಿಕ ಈ ಸಂಶ್ಲೇಷಿತ ರಾಸಾಯನಿಕಗಳನ್ನು ಕೀಟನಾಶಕ, ರಸಗೊಬ್ಬರಗಳ ಉತ್ಪನ್ನಗಳಿಗೆ ಬಳಸಿಕೊಳ್ಳಲಾಯಿತು. ಇದರ ಪರಿಣಾಮವೇ ಭೋಪಾಲದಲ್ಲಿ ತಲೆ ಎತ್ತಿದ ರಾಸಾಯನಿಕ ಕಾರ್ಖಾನೆ. ಆ ಕಾರ್ಖಾನೆ ಅಮೆರಿಕದಲ್ಲೂ ಕಾರ್ಯನಿರ್ವಹಿಸುತ್ತಿತ್ತು. ಆದರೆ ಭೋಪಾಲದ ಕಾರ್ಖಾನೆಯ ವಿನ್ಯಾಸ, ಸ್ಥಳ ಮತ್ತು ನಿರ್ವಹಣೆಯಲ್ಲಿ ಅಜಗಜಾಂತರದ ವ್ಯತ್ಯಾಸವೇ ದುರಂತಕ್ಕೆ ಕಾರಣ. ಕಂಪೆನಿಯು ತನ್ನ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೊಂಡ ಕೆಲವೊಂದು ನಿರ್ಧಾರಗಳು ಆ ಕಾರ್ಖಾನೆ ಜನಸಾಮಾನ್ಯರಿಗೆ ಅಸುರಕ್ಷಿತವಾಗಿ ಸಾವಿರಾರು ಜನರನ್ನು ಬಲಿಪಡೆಯಿತು. ಈ ದುರಂತ ಆಕಸ್ಮಿಕವಲ್ಲ. ಬದಲಾಗಿ ಇದೊಂದು ಕಾರ್ಪೊರೇಟ್ ಅಪರಾಧ ಎಂದು ಅವರು ವಿಶ್ಲೇಷಿಸಿದರು.
ಇಂತಹ ಕಾರ್ಪೊರೇಟ್ ಅಪರಾಧ ಮಂಗಳೂರಿನಲ್ಲಿ ಆಗಬಾರದೆಂದರೆ ಜನರು ಎಚ್ಚೆತ್ತು ಜನಪ್ರತಿನಿಧಿಗಳನ್ನು, ನಮ್ಮನ್ನಾಳುವವರನ್ನು ಪ್ರಶ್ನಿಸುವಂತಾಗಬೇಕು ಎಂದರು.
ಬಳಿಕ ವಿದ್ಯಾರ್ಥಿಗಳ ಜತೆಗಿನ ಸಂವಾದದ ಸಂದರ್ಭ, ಎಂಆರ್‌ಪಿಎಲ್‌ನಿಂದ ಪೆಟ್ರೋಲಿಂಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿರುವುದರಿಂದ ಈಗಾಗಲೇ ಜಲಮೂಲಗಳ ಮೇಲೆ ಪರಿಣಾಮ ಬಿದ್ದಿರುವುದನ್ನು ಅಲ್ಲಗಳೆಯಲಾಗದು. ಈ ಬಗ್ಗೆ ಸಮಗ್ರ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದರು.
ಕಾರ್ಪೊರೇಟ್ ಅಪರಾಧಕ್ಕೆ ತುತ್ತಾಗುವುದು ಬಡವರ್ಗದ ಜನತೆ. ಅವರಿಗೆ ಸರಕಾರದ ನೆರವು, ಬೆಂಬಲ ಇರುವುದಿಲ್ಲ ಎಂದು ಅವರು ಹೇಳಿದರು.
ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ. ಫಾ.ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ವಕ್ತಾರ ಟಿ.ಆರ್.ಭಟ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾ ದಿನಕರ್ ಉಪಸ್ಥಿತರಿದ್ದರು.