ಕಾಟಿಪಳ್ಳ: ಮಿಸ್ಬಾ ಮಹಿಳಾ ಕಾಲೇಜಿನಲ್ಲಿ ಮೀಲಾದ್ ಫೆಸ್ಟ್

ಮಂಗಳೂರು, ಡಿ.22: ಹೆಣ್ಣೊಂದು ಕಲಿತರೆ ಸಮಾಜವೇ ಕಲಿತಂತೆ. ಹಾಗಾಗಿ ಮುಸ್ಲಿಮ್ ಸಮಾಜದ ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಲ್ಲಿನ ಪ್ರತೀ ವಿದ್ಯಾರ್ಥಿನಿಯರು ಇಲ್ಲಿ ಪಡೆದ ಶಿಕ್ಷಣವನ್ನು ಇಲ್ಲಿಗೇ ಬಿಡದೆ ಮುಂದಿನ ಜೀವನಕ್ಕಾಗಿ ಅದನ್ನು ಬಳಸಿಕೊಳ್ಳಬೇಕಾಗಿದೆ ಎಂದು ಮಂಗಳೂರಿನ ಎಕ್ಸ್‌ಪರ್ಟೈಸ್ ಗ್ರೂಪ್ ಆಫ್ ಕಂಪನೀಸ್‌ನ ಆಡಳಿತ ನಿರ್ದೇಶಕ ಅಶ್ರಫ್ ಕರ್ನಿರೆ ಹೇಳಿದರು.
ಕಾಟಿಪಳ್ಳದ ಮಿಸ್ಬಾ ಮಹಿಳಾ ಕಾಲೇಜಿನಲ್ಲಿ ಶನಿವಾರ ಜರುಗಿದ ಮೀಲಾದ್ ಫೆಸ್ಟ್-2018ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾಲೇಜಿನ ಅಧ್ಯಕ್ಷ ಅಲ್‌ಹಾಜ್ ಬಿ.ಎಂ.ಮುಮ್ತಾಝ್ ಅಲಿ ಮಾತನಾಡಿ, ಹಲವರ ಸಹಕಾರದಿಂದ ಮಿಸ್ಬಾ ಮಹಿಳಾ ಕಾಲೇಜು ಉನ್ನತ ಮಟ್ಟಕ್ಕೇರಿದೆ. ಶೈಕ್ಷಣಿಕ ಪಠ್ಯದ ಜೊತೆ ಧಾರ್ಮಿಕ ಶಿಕ್ಷಣವನ್ನು ಬೋಧಿಸುವುದು ಇಲ್ಲಿನ ವಿಶೇಷತೆಯಾಗಿದೆ. ಶಿಸ್ತಿನ ವಿದ್ಯಾರ್ಥಿನಿಯರನ್ನು ರೂಪಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ ಎಂದರು.
ಇದೇ ಸಂದರ್ಭ ಡಾಕ್ಟರೇಟ್ ಪದವಿ ಪಡೆದ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಡಾ.ಅಬ್ದುರ್ರಶೀದ್ ಝೈನಿಯವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಪೆಕ್ಟ್ರಮ್ ಗ್ರೂಪ್ ಅಲ್ ಜುಬೈಲ್ ಇದರ ವ್ಯವಸ್ಥಾಪಕ ನಿರ್ದೇಶಕ ಖಲಂದರ್, ಭಾರತ್ ಇನ್ಫ್ರಾಟೆಕ್ ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಮುಸ್ತಫಾ, ಫೇಸ್ ಗ್ರೂಪ್ ಆಫ್ ಕಂಪನೀಸ್ ಅಲ್ ಜುಬೈಲ್‌ನ ಸಿಇಒ ಅಬೂಬಕರ್ ಕರ್ನಿರೆ, ಎಕ್ಸ್‌ಪರ್ಟೈಸ್ ಗ್ರೂಪ್‌ನ ಶಾವಝ್ ಅಬ್ದುಲ್ ಸತ್ತಾರ್, ಇಸ್ಮಾಯೀಲ್ ಕರ್ನೀರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾಲೇಜಿನ ಸಂಚಾಲಕ ಬಿ.ಎ.ನಝೀರ್, ಟ್ರಸ್ಟಿಗಳಾದ ಅಬು ಸುಫ್ಯಾನ್, ನಾಸಿರ್ ಲಕ್ಕಿಸ್ಟಾರ್, ಅಬ್ದುಲ್ ಹಕೀಂ ಫಾಲ್ಕೂನ್, ಕಾಲೇಜಿನ ಪ್ರಾಂಶುಪಾಲೆ ಝಾಹಿದಾ ಜಲೀಲ್ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.
ಕಾಲೇಜಿನ ಉಪಪ್ರಾಂಶುಪಾಲೆ ಸನಾ ಹುಸೈನ್ ಕಾರ್ಯಕ್ರಮ ನಿರೂಪಿಸಿದರು.