ಫಲಿತಾಂಶ ಹೆಚ್ಚಳಕಾಗಿ ಶಾಲಾ ಮುಖ್ಯಸ್ಥರ ಸಮಾಲೋಚನಾ ಸಭೆ

ಮಂಗಳೂರು, ಡಿ.22: ದ.ಕ. ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಫಲಿತಾಂಶ ಹೆಚ್ಚಳಕಾಗಿ ಶಾಲಾ ಮುಖ್ಯಸ್ಥರ ಸಮಾಲೋಚನಾ ಸಭೆ ಜರುಗಿತು.
ಜಮೀಯ್ಯತುಲ್ ಫಲಾಹ್ ದ.ಕ. ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಹಾಜಿ ಕೆ.ಕೆ.ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿಡಿಪಿಐ ವೈ.ಶಿವರಾಮಯ್ಯ ಮಾತನಾಡಿ 2017-18ರ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಫಲಿತಾಂಶದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಬಹುಪಾಲು ಅಲ್ಪಸಂಖ್ಯಾತ ಗಂಡು ಮಕ್ಕಳಿಂದ ಜಿಲ್ಲೆಯ ಫಲಿತಾಂಶ ಕುಸಿಯಲು ಕಾರಣವಾಗಿದೆ ಎಂದು ಅಂಕಿಅಂಶಗಳೊಂದಿಗೆ ವಿವರಿಸಿದರು.
ಈ ನಿಟ್ಟಿನಲ್ಲಿ ಜಿಲ್ಲೆಯ ಫಲಿತಾಂಶಕ್ಕಿಂತ ಕಡಿಮೆ ಶೇಕಡವಾರು ಫಲಿತಾಂಶ ದಾಖಲಿಸಿದ 103 ಶಾಲೆಗಳ ಮುಖ್ಯಸ್ಥರ ಸಮಾಲೋಚನಾ ಸಭೆ ನಡೆಸುವ ಮೂಲಕ ಅಲ್ಪಸಂಖ್ಯಾತರ ಜೊತೆ ಸೇರಿದರೆ ಪರಿಣಾಮಕಾರಿಯಾದ ಯಶಸ್ಸನ್ನು ಕಾಣಬಹುದೆಂಬ ನಿಟ್ಟಿನಲ್ಲಿ ಈ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನ ಪಡೆಯಬೇಕಿದೆ ಎಂದರು.
ಮಂಗಳೂರು ದಕ್ಷಿಣ ಹಾಗೂ ಉತ್ತರ, ಬಂಟ್ವಾಳ, ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಅನುದಾನಿತ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವೈ.ಮುಹಮ್ಮದ್ ಬ್ಯಾರಿ, ಜಮೀಯ್ಯತುಲ್ ಫಲಾಹ್ ಕಾರ್ಯದರ್ಶಿ ಸಲೀಂ ಹಂಡೇಲು, ಕೋಶಾಧಿಕಾರಿ ಹಾಜಿ ಇಬ್ರಾಹೀಂ ಕೋಡಿಜಾಲ್, ಉಪಾಧ್ಯಕ್ಷ ಅಬೂ ಮುಹಮ್ಮದ್, ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಕೆ.ಜಿ. ರಂಗಯ್ಯ ಉಪಸ್ಥಿತರಿದ್ದರು.
ಹಂಝ ಮಿತ್ತೂರು ಪ್ರಾರ್ಥನಾ ಗೀತೆ ಹಾಡಿದರು. ಶಮನತ್ ವಂದಿಸಿದರು. ಫಲಾಹ್ ಜಿಲ್ಲಾ ಸಮಿತಿ ಸದಸ್ಯ ಹಾಗೂ ಉಪನ್ಯಾಸಕ ಹನೀಫ್ ಕಾರ್ಯಕ್ರಮ ನಿರೂಪಿಸಿದರು.