ವಾಣಿಜ್ಯೀಕರಣ ಶಿಕ್ಷಣದ ಪಾವಿತ್ರವನ್ನು ನಾಶ ಪಡಿಸಿದೆ: ಪ್ರೊ.ಉಮಾಮಹೇಶ್ವರ ರಾವ್

ಮಣಿಪಾಲ, ಡಿ.22: ಶಿಕ್ಷಣಕ್ಕೆ ಇಂದು ಉದ್ದಿಮೆಯ ಸ್ಥಾನಮಾನ ಸಿಕ್ಕಿಬಿಟ್ಟಿದೆ. ಹೀಗಾಗಿ ವಾಣಿಜ್ಯೀಕರಣ ಶಿಕ್ಷಣದ ಪಾವಿತ್ರವನ್ನು ಹಾಳುಗೆಡವಿದೆ. ಕಳೆದು ಹೋದ ಗುರು-ಶಿಷ್ಯ ಸಂಬಂಧದ ಮೂಲಕ ಶಿಕ್ಷಣದ ವೈಭವವನ್ನು, ಘನತೆಯನ್ನು ಮತ್ತೆ ಮರಳಿ ತರಬೇಕಾದ ಅಗತ್ಯವಿದೆ ಎಂದು ಸುರತ್ಕಲ್ ಎನ್‌ಐಟಿಕೆ ನಿರ್ದೇಶಕ ಡಾ.ಕೆ.ಉಮಾಮಹೇಶ್ವರ ರಾವ್ ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ಒಂದು ವರ್ಷದಿಂದ ನಡೆದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಬೆಳ್ಳಿಹಬ್ಬ ಸಂಭ್ರಮದ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರೊ.ರಾವ್ ಅವರು ಮಾತನಾಡುತಿದ್ದರು.
ಇಂದು ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಜೆಇಇ ಪ್ರವೇಶ ಪರೀಕ್ಷೆಗೆ 7.5 ಲಕ್ಷ ಮಂದಿ ಪ್ರತಿವರ್ಷ ಕುಳಿತುಕೊಳ್ಳುತ್ತಾರೆ. ಇವರಲ್ಲಿ ಕೇವಲ ಶೇ.1ರಷ್ಟು ಮಂದಿ ಮಾತ್ರ ವಿವಿಧ ಐಐಟಿಗಳಲ್ಲಿ ಸೀಟು ಪಡೆಯಲು ಯಶಸ್ವಿಯಾಗುತ್ತಾರೆ. ಉಳಿದ ಶೇ.99 ಮಂದಿಯ ಬಗ್ಗೆ ಸಮಾಜ ಯೋಚನೆಯನ್ನೇ ಮಾಡುವು ದಿಲ್ಲ. ಇವರು ತಮ್ಮ ಅಸಮರ್ಥತೆಯ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ ಎಂದರು.
ಶಿಕ್ಷಣ ಇಂದು ಉದ್ದೇಶ ಆಧಾರಿತವಾಗಿದೆ. ಇದು ತಪ್ಪು. ಹೀಗಾಗಿ ಶಿಕ್ಷಣದ ಕುರಿತ ನಮ್ಮ ದೃಷ್ಟಿಕೋನವನ್ನು ನಾವು ಬದಲಾಯಿಸಿಕೊಳ್ಳಬೇಕಿದೆ. ಸಮಗ್ರ ಶಿಕ್ಷಣ ವಿಧಾನವನ್ನು ಅಳವಡಿಸಿಕೊಂಡು, ಯಾವುದೇ ವಿದ್ಯಾರ್ಥಿಗೆ ಆತನ ವೃತ್ತಿ ಆಯ್ಕೆಯ ಬಗ್ಗೆ ಯಾವುದೇ ಗೊಂದಲಗಳು ಇರುವಂತಾಗಬಾರದು ಎಂದವರು ವಿವರಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯ ಹೆತ್ತವರೂ ಇಂದು ಜಗತ್ತಿನಲ್ಲಿ ಕೇವಲ ವೈದ್ಯ ಮತ್ತು ಇಂಜಿನಿಯರ್ ವೃತ್ತಿ ಮಾತ್ರ ಮುಖ್ಯ ಎಂದು ಭಾವಿಸಬಾರದು. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳ ಮುಂದೆ ಹೆಚ್ಚಿನ ಆಯ್ಕೆ ಇಲ್ಲದಂತಾಗಿದೆ. ತಾನು ಆಂಧ್ರದಲ್ಲಿ ಇಂಜಿನಿಯರಿಂಗ್ ಓದುತಿದ್ದಾಗ, ಶಾಲೆಯೊಂದರ ಮುಖ್ಯೋಪಾಧ್ಯಾಯರಾಗಿದ್ದ ನನ್ನ ತಂದೆ ಐದು ವರ್ಷಗಳಲ್ಲಿ ಒಮ್ಮೆಯೂ ನನ್ನ ಹಾಸ್ಟೆಲ್‌ಗೆ ಬಂದಿರಲಿಲ್ಲ. ಆದರೆ ಇಂದು ವಿದ್ಯಾರ್ಥಿಯ ತಾಯಿ ಸಹ ತನ್ನ ಮಗನ ಪಠ್ಯದ ವಿವರ, ಆತ ಪಡೆದ ಅಂಕಗಳು, ಆತನ ಸಹಪಾಠಿ ಪಡೆದ ಅಂಕಗಳನ್ನು ತಿಳಿದಿರುತ್ತಾಳೆ. ಇದು ಆತನ ಮೇಲೆ ಅಪಾರ ಒತ್ತಡವನ್ನು ಹೇರುತ್ತದೆ ಎಂಬ ಸತ್ಯವನ್ನು ಆಕೆ ತಿಳಿಯುವುದೇ ಇಲ್ಲ ಎಂದರು.
ಭಾರತದಲ್ಲಿ ಪ್ರತಿವರ್ಷ 15 ಲಕ್ಷ ಮಂದಿ ಇಂಜಿನಿಯರ್ ಪದವೀಧರರು ಹೊರಬರುತ್ತಾರೆ. ಇವರಲ್ಲಿ ಶೇ.15ರಷ್ಟು ಮಂದಿ ಮಾತ್ರ ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ ಅಥವಾ ಉದ್ಯೋಗ ಪಡೆಯುತ್ತಾರೆ. ಉಳಿದವರು ಕೊನೆಗೆ ತಿಂಗಳಿಗೆ 3,000ರೂ. ಸಂಬಳದ ಯಾವುದೋ ಗುಮಾಸ್ತ ಕೆಲಸ ಮಾಡುತ್ತಾರೆ. ಇದು ನಮ್ಮ ಶಿಕ್ಷಣದಲ್ಲಿರುವ ದೋಷಕ್ಕೆ ನಿದರ್ಶನವಾಗಿದೆ ಎಂದರು.
ದೇಶದಲ್ಲಿ ಈಗಲೂ ಶೇ.33ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಶೇ.50ರಷ್ಟು ಮಹಿಳೆಯರು ಈಗಲೂ ಬಯಲು ಶೌಚಾಲಯವನ್ನೇ ಬಳಸುತ್ತಾರೆ. ಇಂಥ ದೇಶದಲ್ಲಿ ಐಐಟಿಯ ಒಬ್ಬ ವಿದ್ಯಾರ್ಥಿ ವಾರ್ಷಿಕ 1.5 ಕೋಟಿ ರೂ. ಆದಾಯದ ಉದ್ಯೋಗಕ್ಕೆ ಆಯ್ಕೆಯಾದ ವಿಷಯ ದೇಶದ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತದೆ. ಇದರಿಂದ ದೇಶ ಏನು ಸಾಧಿಸಿ ದಂತಾಗುತ್ತದೆ ಎಂದು ಯಾರೂ ಯೋಚಿಸುವುದಿಲ್ಲ. ಇದು ಶಿಕ್ಷಣ ವ್ಯವಹಾರ ವಾಗಿರುವುದನ್ನು ತೋರಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಡಾ.ರಾವ್ ಅವರು ಮಾಹೆ 25 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಹೊರತರಲಾದ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಕಳೆದ 25 ವರ್ಷಗಳಲ್ಲಿ ಮಾಹೆಯ ರಿಜಿಸ್ಟ್ರಾರ್ ಹಾಗೂ ರಿಜಿಸ್ಟ್ರಾರ್ (ವೌಲ್ಯಮಾಪನ)ರಾಗಿ ಕಾರ್ಯ ನಿರ್ವಹಿಸಿದ 11ಮಂದಿಯನ್ನು ಸನ್ಮಾನಿಸಲಾಯಿತು.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಸ್ವಾಗತಿಸಿದರೆ, ಪ್ರಾಸ್ತಾವಿಕವಾಗಿ ಮಾತನಾಡಿದ ಮಾಹೆ ಕುಲಪತಿ ಡಾ.ಎಚ್.ವಿನೋದ್ ಭಟ್, ಕಳೆದ ಒಂದು ವರ್ಷದಲ್ಲಿ 400 ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ ಎಂದರಲ್ಲದೇ, ಮುಂದಿನ ವರ್ಷ ಸಿಡ್ನಿಯ ನ್ಯೂಸೌತ್ ವೇಲ್ಸ್ ವಿವಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದರು.
ರಿಜಿಸ್ಟ್ರಾರ್(ಮೌಲ್ಯಮಾಪನ) ಡಾ.ವಿನೋದ್ ಥಾಮಸ್ ಅತಿಥಿಗಳನ್ನು ಪರಿಚಯಿಸಿದರೆ, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ವಂದಿಸಿದರು. ಎಂಕಾಪ್ಸ್‌ನ ಡಾ.ಅನೂಪ್ ನಾಹಾ ಕಾರ್ಯಕ್ರಮ ನಿರೂಪಿಸಿದರು. ಮಾಹೆಯ ಪ್ರೊ ವೈಸ್‌ಚಾನ್ಸಲರ್‌ಗಳಾದ ಡಾ.ಪಿಎಲ್‌ಎನ್‌ಜಿ ರಾವ್, ಡಾ.ವಿ.ಸುರೇಂದ್ರ ಶೆಟ್ಟಿ ಹಾಗೂ ಡಾ.ಪೂರ್ಣಿಮಾ ಬಾಳಿಗಾ ಉಪಸ್ಥಿತರಿದ್ದರು.