'2020ರಲ್ಲಿ ಅತ್ಯಂತ ದೊಡ್ಡ ಟೆಲಿಸ್ಕೋಪ್ ತಯಾರಿಕೆಗೆ ಯೋಜನೆ'
ಟೆಲಿಸ್ಕೋಪ್ ಕುರಿತ ಕಾರ್ಯಾಗಾರದಲ್ಲಿ ಪ್ರೊ.ಉದಯಶಂಕರ್

ಉಡುಪಿ, ಡಿ.22: ಜಗತ್ತಿನ ವಿವಿಧ ದೇಶಗಳ ವಿಜ್ಞಾನಿಗಳು ಸೇರಿಕೊಂಡು ‘ಸ್ಕ್ವಾರ್ ಕಿಲೋ ಮೀಟರ್ ಅರೈ’ ಎಂಬ ಜಗತ್ತಿನ ಅತ್ಯಂತ ದೊಡ್ಡ ಬಹು ರೇಡಿಯೋ ಟೆಲಿಸ್ಕೋಪ್ ತಯಾರಿಸುವ ಯೋಜನೆಯನ್ನು ರೂಪಿಸಿದ್ದಾರೆ ಎಂದು ಬೆಂಗಳೂರು ರಮಣ್ ಸಂಶೋಧನಾ ಸಂಸ್ಥೆಯ ಪ್ರೊಫೆಸರ್ ಉದಯ ಶಂಕರ್ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಭೌತ ಶಾಸ್ತ್ರ ವಿಭಾಗ, ಮಂಗಳೂರು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮಂಗಳೂರು ವಿವಿ ಭೌತಶಾಸ್ತ್ರ ಅಧ್ಯಾಪಕರ ಸಂಘ ಹಾಗೂ ಅಂಬಲಪಾಡಿ ಕಿದಿಯೂರು ನಾಗಲಕ್ಷ್ಮಿ ಶ್ರೀನಿವಾಸ ಟ್ರಸ್ಟ್‌ನ ಸಹಯೋಗದಲ್ಲಿ ಕಾಲೇಜಿನ ಪೂರ್ಣಪ್ರಜ್ಞ ಮಿನಿ ಅಡಿಟೋರಿಯಂನಲ್ಲಿ ಶನಿವಾರ ನಡೆದ ಎರಡು ದಿನಗಳ ‘ಟೆಲಿಸ್ಕೋಪ್‌ನ ಪಯಣ: ನಿನ್ನೆ, ಇಂದು ನಾಳೆ’ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಆಸ್ಟ್ರೇಲಿಯಾ, ಕೆನಡಾ, ಚೀನಾ, ಭಾರತ, ಇಟಲಿ, ಇಂಗ್ಲೆಂಡ್ ದೇಶಗಳು ಸೇರಿ ಈ ಪ್ರಯತ್ನ ಮಾಡುತ್ತಿದ್ದು, ಇದಕ್ಕಾಗಿ 170 ಬಿಲಿಯನ್ ಯೋರೋವನ್ನು ವ್ಯಯಿಸಲಾಗುತ್ತಿದೆ. ಈ ರೇಡಿಯೋ ಟೆಲಿಸ್ಕೋಪ್‌ನಿಂದ ವಿಶ್ವ ರೂಪದಲ್ಲಿ ಈವರೆಗೆ ನೋಡಲು ಸಾಧ್ಯ ಇಲ್ಲದ ಎಲ್ಲವನ್ನು ನೋಡುವ ರೀತಿಯಲ್ಲಿ ಸಾಧನೆ ಮಾಡಲಾಗುತ್ತಿದೆ. ಇದರ ಮೊದಲ ಹಂತದ ಕಾರ್ಯವು 2020ರಲ್ಲಿ ಆರಂಭಿ ಸಲಾಗುತ್ತಿದೆ ಎಂದರು.
ಪ್ರಥಮವಾಗಿ ದೂರದರ್ಶಕ ಕಂಡುಹಿಡಿದ ಗೆಲಿಲಿಯೋ, ಆ ಮೂಲಕ ವಿಜ್ಞಾನಕ್ಕೆ ಬದ್ಧತೆಯನ್ನು ತಂದು ಕೊಟ್ಟರು. ವಿಶ್ವ ರೂಪದಲ್ಲಿ ನಾವು ಈವರೆಗೆ ಕೇವಲ ಶೇ.0.1ರಷ್ಟು ಭಾಗವನ್ನು ಮಾತ್ರ ನೋಡಿದ್ದೇವೆ. ಆದರೆ ನೋಡ ಬೇಕಾಗಿರುವುದು ತುಂಬಾ ಇದೆ. 13.7 ಬಿಲಿಯನ್ ವರ್ಷಗಳ ಹಿಂದೆ ಬಿಗ್ ಬಾಂಗ್ ಸ್ಪೋಟದ 400 ಮಿಲಿಯನ್ ವರ್ಷಗಳ ಬಳಿಕ ಗ್ಯಾಲಕ್ಸಿ, 9.2 ಬಿಲಿ ಯನ್ ವರ್ಷಗಳ ನಂತರ ಸೂರ್ಯ, ಭೂಮಿ, ಸೋಲಾರ್ ವ್ಯವಸ್ಥೆಗಳು ಸೃಷ್ಠಿಯಾದವು ಎಂದು ಅವರು ಹೇಳಿದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ನಮ್ಮಲ್ಲಿರುವ ದೋಷ ಎಂಬುದು ಅಜ್ಞಾನ. ಈ ಅಜ್ಞಾನದಿಂದಾಗಿ ನಾವು ತಪ್ಪು ದಾರಿಯಲ್ಲಿ ಹೋಗು ತ್ತಿದ್ದೇವೆ. ಜ್ಞಾನ ಬಂದಾಗ ನಾವು ಶುದ್ಧರಾಗಿ ಬದುಕುತ್ತೇವೆ. ಜ್ಞಾನವನ್ನು ನಾವು ಪ್ರಯತ್ನಪೂರ್ವಕವಾಗಿ ಪಡೆಯಬೇಕು. ಆಳವಾದ ಅಧ್ಯಯನದಿಂದ ಹೊಸ ಹೊಸ ವಿಚಾರಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಅಮೆರಿಕಾ ಕೆಂಬ್ರಿಡ್ಜ್‌ನ ಹಾರ್‌ವರ್ಡ್ ಸ್ಮಿತ್‌ಸೋನಿ ಯನ್ ಖಗೋಳ ವಿಜ್ಞಾನ ಕೇಂದ್ರದ ಖಗೋಳ ವಿಜ್ಞಾನಿ ಡಾ.ವಿನಯ್ ಎಲ್. ಕಾಶ್ಯಪ್, ನಾಗಲಕ್ಷ್ಮಿ ಶ್ರೀನಿವಾಸ ಟ್ರಸ್ಟ್‌ನ ಕಾರ್ಯದರ್ಶಿ ಪ್ರೊ.ರಾಧಾಕೃಷ್ಣ ಆಚಾರ್ಯ, ವಿವಿ ಭೌತಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಎ.ಪಿ.ರಾಧಾ ಕೃಷ್ಣ, ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ವಹಿಸಿ ದ್ದರು. ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಪಿ.ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಸುಹಾಸ್ ರಾವ್ ವಂದಿಸಿದರು. ದಿನೇಶ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
ದೂರದರ್ಶಕಗಳ ಅಧ್ಯಯನ ಅಗತ್ಯ
ರೇಡಿಯೋ ದೂರದರ್ಶಕಗಳು ಈವರೆಗಿನ ದೂರದರ್ಶಕಗಳಿಗಿಂತ ಸಂಪೂರ್ಣ ಭಿನ್ನವಾದವುಗಳು. 1937ರಲ್ಲಿ ವಿಜ್ಞಾನಿ ಗ್ರೊಟ್ಟೆ ರೆಬರ್ ರೇಡಿಯೊ ಖಗೋಳಶಾಸ್ತ್ರಕ್ಕೆ ಮುನ್ನುಡಿ ಬರೆದ ನಂತರ ವಿಶ್ವದ ಅಧ್ಯಯನದಲ್ಲಿ ಹೊಸ ಕ್ರಾಂತಿ ಉಂಟಾಗಿದೆ. ಇಂದು ಮೈಕ್ರೋವೇವ್ ಖಗೋಳಶಾಸ್ತ್ರ, ಐಆರ್ ಖಗೋಳ ಶಾಸ್ತ್ರ, ಎಕ್ಸ್‌ಕಿರಣ ಖಗೋಳಶಾಸ್ತ್ರ, ಗಾಮಾಕಿರಣ ಖಗೋಳಶಾಸ್ತ್ರ, ಅಲ್ಟ್ರಾ ವೈಲೆಟ್ ಖಗೋಳಶಾಸ್ತ್ರಗಳು ವಿಶ್ವದ ಸೃಷ್ಠಿ, ವಿಶ್ವದ ಉಗಮ, ವಿಶ್ವದ ಬೆಳವಣಿಗೆಯ ಕುರಿತು ಮಾಹಿತಿ ಕಲೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಹೀಗಾಗಿ ದೂರದರ್ಶಕಗಳ ಕುರಿತು ಅಧ್ಯಯನ ಅತಿ ಅಗತ್ಯವಾಗಿದೆ ಎಂದು ಖಗೋಳಶಾಸ್ತ್ರಜ್ಞ ಡಾ.ಎ.ಪಿ.ಭಟ್ ತಿಳಿಸಿದರು.