ವಾರಾಹಿ ಕುಡಿಯುವ ನೀರು ಯೋಜನೆಗೆ ಕಾನೂನಿನ ತೊಡಕಿಲ್ಲ: ರಾಘವೇಂದ್ರ

ಉಡುಪಿ, ಡಿ.22: ವಾರಾಹಿಯಿಂದ ಉಡುಪಿ ನಗರಸಭೆಗೆ ನೀರು ಸರಬ ರಾಜು ಮಾಡುವ ಯೋಜನೆ ವಿರುದ್ಧ ರೈತ ಸಂಘದವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ವಾರಾಹಿ ನದಿಯಲ್ಲಿರುವ ನೀರಿನ ಲಭ್ಯತೆ ಕುರಿತು ನೀರಾವರಿ ನಿಗಮ ನೀಡಿರುವ ಮಾಹಿತಿಯನ್ನು ನಗರಸಭೆಯು ಹೈಕೋರ್ಟ್‌ಗೆ ಸಲ್ಲಿಸಿದೆ. ಇದಕ್ಕೆ ಈವರೆಗೆ ಹೈಕೋರ್ಟ್ ತಡೆಯಾಜ್ಞೆ ನೀಡದಿರುವುದರಿಂದ ಮುಂದೆ ಕಾನೂನಿನ ಯಾವುದೇ ತೊಡಕು ಎದುರಾಗುವುದಿಲ್ಲ ಎಂದು ಉಡುಪಿ ನಗರಸಭೆ ಪರಿಸರ ಅಭಿಯಂತರ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ನಗರ ಮೂಲ ಸೌಕರ್ಯದ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಕ್ವಿಮಿಕ್ ಟ್ರಾಂಪ್-2 ಅಡಿಯಲ್ಲಿ ಉಡುಪಿ ನಗರದಲ್ಲಿ ಕೈಗೊಳ್ಳುವ 24x7 ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಕಾಮಗಾರಿಗಳ ಬಗ್ಗೆ ಉಡುಪಿ ನಗರಸಭೆ ಸಭಾಭವನದಲ್ಲಿ ಶನಿವಾರ ನಡೆದ ತೆಂಕಪೇಟೆ ಹಾಗೂ ಶಿರಿಬೀಡು ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಕಾರ್ಯಾ ಗಾರದಲ್ಲಿ ಅವರು ಮಾತನಾಡುತಿದ್ದರು.
ವಾರಾಹಿ ನದಿಯಲ್ಲಿ 41.46 ಕ್ಯುಮೆಕ್ಸ್ ನೀರು ಲಭ್ಯ ಇದ್ದು, ಅದರಲ್ಲಿ 31.15ಕ್ಯುಮೆಕ್ಸ್ ನೀರನ್ನು 17ಸಾವಿರ ಹೆಕ್ಟೇರ್ ವ್ಯಾಪ್ತಿಯ ವಾರಾಹಿ ನೀರಾವರಿ ಯೋಜನೆಗೆ ಬಳಸಲಾಗುತ್ತದೆ. ಉಳಿದ 9.46ಕ್ಯುಮೆಕ್ಸ್ ನೀರಿನಲ್ಲಿ ಉಡುಪಿ ನಗರಸಭೆಯು ಕೇವಲ 0.47 ಕ್ಯುಮೆಕ್ಸ್ ನೀರನ್ನು ಮಾತ್ರ ಪಂಪ್ ಮಾಡುತ್ತದೆ. ಇದರಿಂದ ಸ್ಥಳೀಯ ರೈತರಿಗೆ ಯಾವುದೇ ಸಮಸ್ಯೆ ಆುವುದಿಲ್ಲ ಎಂದು ಅವರು ತಿಳಿಸಿದರು.
ಅಮೃತ್ ಯೋಜನೆ, ಎಡಿಬಿ ಸಾಲ ಹಾಗೂ ಉಡುಪಿ ನಗರಸಭೆಯ ಒಟ್ಟು 295.61 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿದೆ. ನಗರಕ್ಕೆ ಪ್ರತಿದಿನ 15 ಎಂಎಲ್‌ಡಿ ನೀರಿನ ಅವಶ್ಯಕತೆ ಇದ್ದು, ಆದರೆ ನಮ್ಮಲ್ಲಿರುವ ಪಂಪ್ ಒಂದು ಗಂಟೆಗೆ ಕೇವಲ ಒಂದು ಎಂಎಲ್‌ಡಿ ನೀರನ್ನು ಪಂಪ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಸರಿಯಾಗಿ ನೀರು ಸರಬ ರಾಜು ಮಾಡಲು ಸಾಧ್ಯವಾಗುತ್ತಿಲ್ಲ ಈ ಯೋಜನೆ ಜಾರಿಯಾದ ನಂತರ ಈ ಸಮಸ್ಯೆ ನಿವಾರಣೆಯಾಗಿ ದಿನದ 24 ಗಂಟೆಗಳ ಕಾಲವೂ ನೀರು ಸರಬರಾಜು ಮಾಡಲಾಗುತ್ತದೆ ಎಂದರು.
ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮಕೃಷ್ಣಯ್ಯ ಯೋಜನೆ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ನಗರಸಭಾ ಸದಸ್ಯರಾದ ಟಿ.ಜೆ.ಹೆಗ್ಡೆ, ಮಾನಸಿ ಎಂ.ಪೈ, ಅಮೃತಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸಾರ್ವಜನಿಕರೇ ಇಲ್ಲ !
ತೆಂಕಪೇಟೆ ಹಾಗೂ ಶಿರಿಬೀಡು ವಾರ್ಡ್‌ಗಳ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸುವ ನಿಟ್ಟಿನಲ್ಲಿ ಕರೆಯಲಾದ ಈ ಸಭೆಯಲ್ಲಿ ಇಬ್ಬರು ಬಿಟ್ಟರೇ ಬೇರೆ ಸಾರ್ವಜನಿಕರೇ ಇರಲಿಲ್ಲ.
ಬೆಳಗ್ಗೆ 11:30ಕ್ಕೆ ಆರಂಭಗೊಳ್ಳಬೇಕಿದ್ದ ಸಭೆಯನ್ನು ಸಾರ್ವಜನಿಕರಿಲ್ಲದೆ ಒಂದು ಗಂಟೆ ತಡವಾಗಿ ಆರಂಭಿಸಲಾಯಿತು. ಕೇವಲ ಇಬ್ಬರು ಮಾತ್ರ ಆಗಮಿಸಿದ್ದರಿಂದ ಕಚೇರಿಯ ಸಿಬ್ಬಂದಿಗಳನ್ನು ತಂದು ಸಭೆಯಲ್ಲಿ ಕೂರಿಸಿ ಸಭೆಯನ್ನು ಮುಂದುವರೆಸಲಾಯಿತು. ‘ಪತ್ರಿಕೆಯಲ್ಲಿ ಮುಂಚಿತವಾಗಿ ಸಭೆಯ ಕುರಿತು ಮಾಹಿತಿ ನೀಡಿದರೂ ಸಾರ್ವಜನಿಕರ ಉಪಸ್ಥಿತಿಯೇ ಇಲ್ಲ’ ಎಂದು ಪರಿಸರ ಅಭಿಯಂತರ ರಾಘವೇಂದ್ರ ತಿಳಿಸಿದರು.
‘ನಾವು ಕೂಡ ಸಾಕಷ್ಟು ಮಂದಿಗೆ ಮಾಹಿತಿ ನೀಡಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಈ ಯೋಜನೆ ಜಾರಿಗೊಳಿಸಿ ದಿನದ 24 ಗಂಟೆ ನೀರು ಸರಬ ರಾಜು ಮಾಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಜನರಿಗೆ ಈ ಸಭೆಯ ಮೇಲೆ ನಂಬಿಕೆ ಇಲ್ಲವಾಗಿದೆ’ ಎಂದು ನಗರಸಭೆ ಸದಸ್ಯ ಟಿ.ಜೆ.ಹೆಗ್ಡೆ ತಿಳಿಸಿದರು.