ಆ್ಯಂಬಿಡೆಂಟ್ ಪ್ರಕರಣ ಸಿಬಿಐಗೆ ವಹಿಸಲು ರವಿಕೃಷ್ಣಾರೆಡ್ಡಿ ಒತ್ತಾಯ
ಬೆಂಗಳೂರು, ಡಿ.22: ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಶಾಸಕರು ಹಾಗೂ ಸಚಿವರು ಶಾಮೀಲಾಗಿರುವ ಆರೋಪ ಇರುವುದರಿಂದ ಇದನ್ನು ಸಿಬಿಐಗೆ ವಹಿಸುವುದೆ ಸೂಕ್ತವೆಂದು ಲಂಚಮುಕ್ತ ಕರ್ನಾಟಕ ವೇದಿಕೆಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಸರಕಾರವನ್ನು ಒತ್ತಾಯಿಸಿದರು.
ಶನಿವಾರ ಆ್ಯಂಬಿಡೆಂಟ್, ಆಲಾ, ಇಂಝಾಝ್, ಅಜ್ಮೀರ ಇತ್ಯಾದಿ ಕಂಪನಿಗಳಿಂದ ವಂಚನೆಗೊಳಗಾಗಿರುವ ಜನರಿಗೆ ನ್ಯಾಯ ಮತ್ತು ಪರಿಹಾರಕ್ಕೆ ಆಗ್ರಹಿಸಿ ಲಂಚಮುಕ್ತ ಕರ್ನಾಟಕ ವೇದಿಕೆ ವತಿಯಿಂದ ನಗರದ ಆನಂದರಾವ್ ವೃತ್ತದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಉಪವಾಸ ಮತ್ತು ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆ್ಯಂಬಿಡೆಂಟ್ ಕಂಪೆನಿಯಿಂದ ವಂಚನೆಗೆ ಒಳಗಾದ ಸಂತ್ರಸ್ಥರು 2017ರಲ್ಲಿಯೆ ಸಂಬಂಧಿಸಿದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆದರೆ, ಈ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿರುವುದರಿಂದ ಸಂತ್ರಸ್ಥರ ದೂರನ್ನು ಮೂಲೆಗೆ ಎಸೆಯಲಾಗಿದೆ. ಹೀಗಾಗಿ ಈ ಪ್ರಕರಣವನ್ನು ಸಿಸಿಬಿಯಿಂದ ತನಿಖೆ ನಡೆಸುವುದರಿಂದ ಯಾವುದೆ ಪ್ರಯೋಜನ ಇಲ್ಲವೆಂದು ಅವರು ಹೇಳಿದರು.
ಆ್ಯಂಬಿಡೆಂಟ್ ಕಂಪನಿಯಲ್ಲಿ ಸಾವಿರಾರು ಮಂದಿ ಸಂತ್ರಸ್ತರು ಹಣ ಹೂಡಿದ್ದು, ಕೋಟ್ಯಂತರ ರೂ. ಹಗರಣ ಇದಾಗಿದೆ. ಹಾಗೂ ಇದರಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡ ಇರುವುದರಿಂದ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ವಹಿಸುವುದು ಸೂಕ್ತ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಸರಕಾರ ಪರಿಹಾರ ಒದಗಿಸಲಿ: ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಸರಕಾರದ ನಿರ್ಲಕ್ಷ ಧೋರಣೆಯಿಂದಾಗಿಯೆ ಆರೋಪಿಗಳು ಮೋಸ ಮಾಡಲು ಕಾರಣವಾಗಿದೆ. ಹೀಗಾಗಿ ಪ್ರಾಥಮಿಕ ಹಂತವಾಗಿ ಸಂತ್ರಸ್ಥರಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಪ್ರಕರಣದಲ್ಲಿ ಮೋಸ ಮಾಡಿದ ಆರೋಪಿಗಳಿಂದ ಸಂತ್ರಸ್ತರ ಹಣವನ್ನು ವಾಪಸ್ ಪಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಹೇಳಿದರು.
ಆ್ಯಂಬಿಡೆಂಟ್ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೆ ಧರಣಿ ನಡೆಸುವುದಕ್ಕೆ ನಾನು ಸಿದ್ಧವಾಗಿದ್ದೇನೆ. ಆದರೆ, ಪ್ರಕರಣದಲ್ಲಿ ಸಂತ್ರಸ್ತರಾಗಿರುವವರು ಧರಣಿಯಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ಸಾಂಕೇತಿಕವಾಗಿ ಮೂರು ದಿನ ಅನಿರ್ದಿಷ್ಟಾವಧಿ ಉಪವಾಸ ಮತ್ತು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದೇನೆ. ಸಂತ್ರಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ, ಧರಣಿ ಸತ್ಯಾಗ್ರಹವನ್ನು ಮತ್ತಷ್ಟು ದಿನ ಮುಂದುವರೆಸಲಾಗುವುದು ಎಂದು ಅವರು ಹೇಳಿದರು.
ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಆ್ಯಂಬಿಡೆಂಟ್ ಪ್ರಕರಣದಲ್ಲಿ ವಂಚನೆಗೆ ಒಳಗಾದ ಸಂತ್ರಸ್ತರು ಬೀದಿಗೆ ಇಳಿಯಬೇಕಾಗಿದೆ. ಹೋರಾಟದ ನೇತೃತ್ವವನ್ನು ರವಿಕೃಷ್ಣಾರೆಡ್ಡಿ, ನಾನು ಸೇರಿದಂತೆ ಹಲವು ಮುಖಂಡರು ವಹಿಸಿಕೊಳ್ಳುವುದಕ್ಕೆ ಸಿದ್ಧರಿದ್ದೇವೆ. ಸಂತ್ರಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಆಶಿಸಿದರು.
ದೊಡ್ಡ ಮಟ್ಟದ ಹೋರಾಟ ಅಗತ್ಯವಿದೆ
ಸಮಾಜದಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ, ಸರಕಾರದ ಕೆಲವು ಅಧಿಕಾರಿಗಳು, ಜನಪ್ರನಿಧಿಗಳ ಕುಮ್ಮಕ್ಕು ಇರುವುದು ಆತಂಕದ ಬೆಳವಣಿಗೆಯಾಗಿದೆ. ಇಂತಹ ಸಂದರ್ಭದಲ್ಲಿ ವಂಚನೆ ಪ್ರಕರಣದ ವಿರುದ್ಧ ದೊಡ್ಡ ಮಟ್ಟದ ಹೋರಾಟ ಅಗತ್ಯವಿದೆ.
-ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ ಹೋರಾಟಗಾರ