ಪಚ್ಚನಾಡಿ ಸೇತುವೆ ಬಳಿ ಸರಣಿ ಅಪಘಾತ: 12 ಮಂದಿಗೆ ಗಾಯ

ಮಂಗಳೂರು, ಡಿ. 22: ನಗರದ ಪಚ್ಚನಾಡಿ ಸೇತುವೆ ಸಮೀಪ ಖಾಸಗಿ ಬಸ್‌ವೊಂದು ಬ್ರೇಕ್ ಫೈಲ್ ಆಗಿ ಕಾರು, ಟೆಂಪೋ, ಬೈಕ್‌ಗೆ ಢಿಕ್ಕಿಯಾದ ಸರಣಿ ಅಪಘಾತದಲ್ಲಿ 12 ಮಂದಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಯಂತ್, ಕೂಸಪ್ಪ, ಅಬ್ದುಲ್ ರಹ್ಮಾನ್, ಮಾರ್ಷಲ್ ಮೆನೇಜಸ್, ಗ್ರೆಗೋರಿ, ಅಭಿನವ್, ಮುಕುಂದ ಭಟ್, ಮ್ಯಾಕ್ಸಿಲ್, ಪ್ರಜ್ವಲ್ ಫೆರ್ನಾಂಡೀಸ್, ಕರುಣಾಕರ ಶೆಟ್ಟಿ, ಮಹಾಲಿಂಗ ಗಾಯಗೊಂಡವರು.
ಶನಿವಾರ ಸಂಜೆ ಪದವಿನಂಗಡಿ ಕಡೆಯಿಂದ ಖಾಸಗಿ ಬಸ್ ಪಚ್ಚನಾಡಿಗೆ ತೆರಳುತ್ತಿದ್ದಾಗ ರೈಲ್ವೆ ಟ್ರ್ಯಾಕ್ ಸಮೀಪದ ಚಡಾವಿನಲ್ಲಿ ಬ್ರೇಕ್ ಫೈಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದೆ. ಇದರ ಪರಿಣಾಮ ಎದುರಿನಲ್ಲಿ ಚಲಿಸುತ್ತಿದ್ದ ಕಾರಿಗೆ ಹಾಗೂ ಟೆಂಪೋ, ಬೈಕ್ ಢಿಕ್ಕಿಯಾಗಿ ಎದುರಿನಲ್ಲಿದ್ದ ಹೊಂಡಕ್ಕೆ ಬಿದ್ದು ನಿಂತಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದ್ದು, ಗಾಯಗೊಂಡ ಎಲ್ಲರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಟೆಂಪೋ ದೂಡುತ್ತಿದ್ದರು: ಶನಿವಾರ ಸಂಜೆ ಪಚ್ಚನಾಡಿ ಚಡಾವಿನಲ್ಲಿ ಟೆಂಪೋವೊಂದು ಕೆಟ್ಟು ರಸ್ತೆಯಲ್ಲಿ ನಿಂತಿತ್ತು. ಇದನ್ನು ದೂಡುತ್ತಿದ್ದ ವೇಳೆ ಹಿಂದಿನಿಂದ ಬಸ್ ಬ್ರೇಕ್ ಫೈಲ್ ಆಗಿ ಅವರಿಗೆ ಢಿಕ್ಕಿಯಾಗಿದೆ.
ನೆರವಿಗೆ ಬಂದ ಸ್ಥಳೀಯರು: ಘಟನೆ ನಡೆದ ಕೂಡಲೇ ಸ್ಥಳೀಯ ನಿವಾಸಿ ಬಾಲಕೃಷ್ಣ ಮತ್ತಿತರರು ಕಾರಿನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ, ಮಾನವೀಯತೆ ಮೆರೆದಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಬೇರೆ ವಾಹನದಲ್ಲಿ ಕಳುಹಿಸಲಾಯಿತು ಎಂದು ತಿಳಿದುಬಂದಿದೆ.