ರಾಜ್ಯ ಸಂಸದೀಯ ಕಾರ್ಯದರ್ಶಿಯಾಗಿ ಐವನ್ ಡಿಸೋಜ ಆಯ್ಕೆ

ಮಂಗಳೂರು, ಡಿ. 22: ಕರ್ನಾಟಕ ಸರಕಾರದ ಸಂಸದೀಯ ಕಾರ್ಯದರ್ಶಿಯಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಯ್ಕೆಯಾಗಿದ್ದಾರೆ.
ವಿಧಾನ ಪರಿಷತ್‌ನ ಸದಸ್ಯರಾಗಿ ಆಯ್ಕೆಯಾಗಿದ್ದ ಐವನ್ ಡಿಸೋಜ ವಿಧಾನ ಪರಿಷತ್‌ನ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದ್ದು, ಪ್ರಸಕ್ತ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಉಡುಪಿಯ ಮುದರಂಗಡಿಯಲ್ಲಿ ಜನಿಸಿ ಬಾಲ್ಯದ ಶಿಕ್ಷಣವನ್ನು ಮುದರಂಗಡಿಯಲ್ಲಿ ಪಡೆದು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜ್‌ನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು, ನಗರದ ಎಸ್‌ಡಿಎಂ ಕಾಲೇಜಿನಲ್ಲಿ ಬಿ.ಎ., ಎಲ್.ಎಲ್.ಬಿ ಪದವಿ ಪಡೆದು ವಕೀಲ ವೃತ್ತಿಯನ್ನು ಆರಂಭಿಸಿದ್ದರು.
1989 ಐಸಿವೈಎಂ ಅಧ್ಯಕ್ಷರಾಗಿ ಸಂಘಟನೆಯ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಐವನ್ ಡಿಸೋಜ ಬಳಿಕ ಮಂಗಳೂರಿನ ವಿವಿಧ ಸಂಘಟನೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಅವರು 1992ರಲ್ಲಿ ರಾಜಕೀಯ ಪ್ರವೇಶಿಸಿದ್ದಾರೆ. 2008ರ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಆಗಿನ ಬಿಜೆಪಿ ಶಾಸಕ ಯೋಗೀಶ್ ಭಟ್ ಅವರ ಎದುರು ಪರಾಭವಗೊಂಡಿದ್ದರು. 2013ರ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ಸಂಚಾಲಕರಾಗಿ, ವಕ್ತಾರರಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ವಿಧಾನ ಪರಿಷತ್‌ನ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದ್ದಾರೆ.