ನಿರ್ಲಕ್ಷಿತ ಮಕ್ಕಳೇ ಅಪರಾಧ ಪ್ರಕರಣದಲ್ಲಿ ಭಾಗಿ: ನ್ಯಾ.ಲಾವಣ್ಯ

ಉಡುಪಿ, ಡಿ.22: ಸಮಾಜದಲ್ಲಿ ಪೋಷಕರಿಂದ, ಕುಟುಂಬದಿಂದ, ಶಾಲೆ ಗಳಿಂದ ಹಾಗೂ ಮಕ್ಕಳಪಾಲನಾ ಸಂಸ್ಥೆಗಳಿಂದ ನಿರ್ಲಕ್ಷಕ್ಕೆ ಒಳಗಾಗುವ ಮಕ್ಕಳೇ ಮುಂದೆ ಕಾನೂನು ಸಂಘರ್ಷಕ್ಕೆ ಸಿಲುಕುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಮತ್ತು ಜಿಲ್ಲಾ ಬಾಲ ನ್ಯಾಯ ಮಂಡಳಿಯ ಅಧ್ಯಕ್ಷ ಎಚ್.ಎನ್.ಲಾವಣ್ಯ ತಿಳಿಸಿದ್ದಾರೆ.
ಶನಿವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ,ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲಾದ ಮಕ್ಕಳ ಪ್ರಕರಣಗಳ ವೈಯಕ್ತಿಕ ಕಡತದ ದಾಖಲಾತಿ ನಿರ್ವಹಣೆ ಕುರಿತು ಮಕ್ಕಳ ಪಾಲನಾ ಸಂಸ್ಥೆಗಳ ಅಧಿಕಾರಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಕ್ಕಳು ದೇಶದ ಸಂಪತ್ತು, ಮಕ್ಕಳ ಬೆಳವಣಿಗೆಯ ಯಾವುದೇ ಹಂತದಲ್ಲಿ ಅವರನ್ನು ಪೋಷಕರು, ಕುಟುಂಬ, ಶಾಲೆ ಮತ್ತು ಸಮಾಜ ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ನಿರ್ಲಕ್ಷತೆಯಿಂದ ಕಂಡರೆ ಅಂತಹ ಮಕ್ಕಳು ಕಾನೂನು ಸಂಘರ್ಷಕ್ಕೆ ಸಿಲುಕಿ ಅಪರಾಧ ಪ್ರಕರಣಗಳಲ್ಲಿ ತೊಡಗುವ ಸಾಧ್ಯತೆ ಅಧಿಕವಾಗಿದೆ. ವಿವಿಧ ಕಾರಣಗಳಿಂದ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ದಾಖಲಾಗುವ ಮಕ್ಕಳಿಗೆ ಎಲ್ಲಾ ರೀತಿಯ ಪ್ರೋತ್ಸಾಹ ಹಾಗೂ ಅವರ ಬಾಲ್ಯವನ್ನು ಅನುಭವಿಸಲು ಅಗತ್ಯ ವಾತಾವರಣ ನಿರ್ಮಾಣ ಮಾಡಬೇಕು. ಇದರಿಂದ ಮಕ್ಕಳು ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳ ರಕ್ಷಣೆಗೆ ಹಲವು ಕಾನೂನುಗಳಿವೆ. ಈ ಕಾನೂನುಗಳನ್ನು ಪ್ರತಿ ಯೊಬ್ಬರೂ ಗೌರವಿಸಿ, ಪಾಲಿಸಿ. ಮಕ್ಕಳ ಪಾಲನಾ ಸಂಸ್ಥೆಯಲ್ಲಿ ದಾಖಲಾಗುವ ಮಕ್ಕಳನ್ನು ಪೋಷಕರ ರೀತಿ ನೋಡಿಕೊಳ್ಳಿ. ಅವರ ದಾಖಲಾತಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಸುರಕ್ಷಿತವಾಗಿ ದಾಖಲಿಡಿ. ಈ ದಾಖಲಾತಿಗಳು ಮಕ್ಕಳ ಮುಂದಿನ ಭವಿಷ್ಯದ ದೃಷ್ಠಿಯಿಂದ ಅತ್ಯಗತ್ಯ ಎಂದು ನ್ಯಾಯಾಧೀಶರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಉದ್ದೇಶದಿಂದ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಗ್ರಾಮ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳು ಮತ್ತು ಈ ಎಲ್ಲಾ ಹಂತದಲ್ಲಿ ಕಾರ್ಯ ನಿರ್ವಹಿಸಬೇಕಾದ ಅಧಿಕಾರಿಗಳು ಹಾಗೂ ಅವರ ಕರ್ತವ್ಯದ ಕುರಿತು ಹಾಗೂ ತುರ್ತು ರಕ್ಷಣಾ ತಂಡಗಳನ್ನು ರಚಿಸುವ ನಿಯಮ ರೂಪಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಸ್ನೇಹಿ ವಾತಾವರಣ ನಿರ್ಮಿಸಲಾ ಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೋನಲ್ಡ್ ಬಿ ಪುರ್ಟಾಡೊ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್, ಸಂಪನ್ಮೂಲ ವ್ಯಕ್ತಿಗಳಾದ ಸಿಸ್ಟರ್ ಲಿಲ್ಲಿ ಪುಷ್ಪಾ ಮತ್ತು ದೇವಿದಾಸ್ ಎನ್.ಕೆ ಉಪಸ್ಥಿತರಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಯಾನಂದ್ ಸ್ವಾಗತಿಸಿದರು. ಮಕ್ಕಳ ರಕ್ಷಣಾ ಘಟಕದ ಕಾನೂನು ಸಂರಕ್ಷಣಾಧಿಕಾರಿ ಪ್ರಭಾಕರ್ ನಿರೂಪಿಸಿ, ವಂದಿಸಿದರು.