ಆಳ್ವಾಸ್ ಶಿಲ್ಪ ವಿರಾಸತ್ ಕಾರ್ಯಕ್ರಮ

ಮೂಡುಬಿದಿರೆ, ಡಿ. 22: ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಭಿನ್ನ ರೀತಿಯ ಕಲೆಗಳಿರುತ್ತವೆ. ಅದನ್ನು ಪ್ರದರ್ಶಿಸಲು ಆಸಕ್ತಿ ಮತ್ತು ಅವಕಾಶ ತುಂಬಾ ಮುಖ್ಯ. ಆಸಕ್ತಿ ಎನ್ನುವುದು ಸತತ ಪ್ರಯತ್ನದಿಂದ ಹುಟ್ಟಿಕೊಂಡರೇ, ಅವಕಾಶ ಕಲೆಗಾರನನ್ನು ಅರಸುತ್ತಾ ಬರುತ್ತದೆ ಎಂದು ಬೆಂಗಳೂರಿನ ಹಿರಿಯ ಶಿಲ್ಪಕರ್ಮಿ ಸೂರಾಲು ವೆಂಕಟರಮಣ ಭಟ್ ತಿಳಿಸಿದರು.
ಆಳ್ವಾಸ್ ವಿರಾಸತ್ 2018ರ ಅಂಗವಾಗಿ ನಡೆಯುತ್ತಿರುವ `ಆಳ್ವಾಸ್ ಶಿಲ್ಪ ವಿರಾಸತ್’ನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದರೆ ಶಿಲ್ಪಕಲೆಯು ಅಗತ್ಯವಾಗಿದೆ. ಆದ್ದರಿಂದ ಇದಕ್ಕೆ ಯಾವತ್ತೂ ಬೇಡಿಕೆ ಕಡಿಮೆಯಾಗುವುದಿಲ್ಲ. ದೇವರು, ದೇವಸ್ಥಾನಗಳಲ್ಲದೆ ಇನ್ನೂ ವಿಭಿನ್ನ ಶೈಲಿಯ ಶಿಲ್ಪಕಲೆಗಳಿವೆ. ಇದೆಲ್ಲವನ್ನೂ ಜನರಿಗೆ ಪರಿಚಯಿಸುವ ಪ್ರಯತ್ನವಾಗಬೇಕಿದೆ. ಶಿಲ್ಪಕಲೆ ಸಮರ್ಪಣಾ ಮನೋಭಾವ ಹಾಗೂ ನಿರಂತರ ಪರಿಶ್ರಮವನ್ನು ಬೇಡುವ ಕ್ಷೇತ್ರ. ಒಂದು ಶಿಲ್ಪವನ್ನು ಆರಂಭಿಸುವ ಮೊದಲು ಶಿಲ್ಪಿಯಲ್ಲೇ ದೃಢವಾದ ಆತ್ಮವಿಶ್ವಾಸ ಜೊತೆಗೆ ಸತತ ಪರಿಶ್ರಮ ವಿರಬೇಕು ಆಗ ಮಾತ್ರ ಶಿಲ್ಪಕ್ಕೆ ಒಂದು ಒಳ್ಳೆಯ ರೂಪ, ಬೆಲೆ ಬರಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟ್ರಿ ವಿವೇಕ್ ಆಳ್ವ ಕಲೆಗಾರನಿಗೆ ಅವಕಾಶಗಳು ತುಂಬಾ ಇದೆ. ಸ್ವಂತಿಕೆ ಮತ್ತು ಕ್ರಿಯಾಶೀಲತೆ ಬಳಸಿ ವಿಭಿನ್ನ ಶೈಲಿಯ ಹೊಸತನ ರೂಪಿಸಿದರೆ ಖಂಡಿತ ಈ ಕಲೆಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶಿಲ್ಪ ವಿರಾಸತ್ ಸಲಹಾ ಸಮಿತಿ ಸದಸ್ಯರಾದ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಆಡ್ವೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೀಕ್ಷಾ ಗೌಡ ನಿರೂಪಿಸಿದರು.