ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿಯ ಜಮೀನಿನಲ್ಲಿ ತಾತ್ಕಾಲಿಕ ಮೀನು ಮಾರುಕಟ್ಟೆ: ಜಿಲ್ಲಾಧಿಕಾರಿ

ಬಂಟ್ವಾಳ, ಡಿ. 22: ಫರಂಗಿಪೇಟೆ ಈಗಿರುವ ಮೀನು ಮಾರುಕಟ್ಟೆಯ ಬಳಿಯಲ್ಲಿಯೇ ರಾಷ್ಟ್ರೀಯ ಹೆದ್ದಾರಿಯ ಜಮೀನಿನಲ್ಲಿ ತಾತ್ಕಾಲಿಕ ಮೀನು ಮಾರುಕಟ್ಟೆ ಆರಂಭಿಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪುದು ಪಂಚಾಯತ್‍ಗೆ ಸೂಚನೆ ನೀಡಿದ್ದಾರೆ.
ಶನಿವಾರ ಸಂಜೆ ಫರಂಗಿಪೇಟೆಗೆ ಭೇಟಿ ನೀಡಿದ ಅವರು ಮೀನು ಮಾರುಕಟ್ಟೆಗೆ ಜಮೀನು ಪರಿಶೀಲನೆ ನಡೆಸಿದರು. ಮೀನು ಮಾರುಕಟ್ಟೆಗೆ ಆಗಮಿಸಿ ಬಳಿಕ ಇಲ್ಲಿನ ಹತ್ತನೇ ಮೈಲು ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯ ಖಾಲಿ ಜಮೀನನ್ನು ವೀಕ್ಷಿಸಿದ ಅವರು ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರ ಜೊತೆ ಚರ್ಚೆ ನಡೆಸಿದರು.
ಫರಂಗಿಪೇಟೆಯಲ್ಲಿಯೇ ಈಗಿರುವ ಮೀನು ಮಾರುಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿರುವ ಜಮೀನಿನಲ್ಲಿ ತಾತ್ಕಾಲಿಕವಾಗಿ ಮಾರುಕಟ್ಟೆಗೆ ಅವಕಾಶ ಕಲ್ಪಿಸಲು ಸೂಚಿಸಿರುವುದಾಗಿ ತಿಳಿದು ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ರೈಲ್ವೇ ಇಲಾಖೆಗೆ ಸೇರಿದ ಜಮೀನಿನಲ್ಲಿ ಮೀನು ಮಾರುಕಟ್ಟೆ ಕಾರ್ಯಚರಿಸುತ್ತಿದೆ ಎಂದು ರೈಲ್ವೇ ಅಧಿಕಾರಿಗಳು ಮೀನು ಮಾರುಕಟ್ಟೆಯನ್ನು ತೆರವುಗಳಿಸುವ ಕಾರ್ಯಚರಣೆ ನಡೆಸಿದ್ದರು.
ಪುದು ಪಂಚಾಯತ್ ಹಾಗೂ ಸ್ಥಳೀಯ ಜನನಾಯಕರ ಮನವಿಗೆ ಮಣಿದು ಒಂದೂವರೆ ತಿಂಗಳ ಕಾಲವಕಾಶ ನೀಡಿ ಕಾರ್ಯಾಚರಣೆ ಮೊಟಕು ಗೊಳಿಸಿದ್ದರು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿದ್ದು ರೈಲ್ವೇ ಇಲಾಖೆ ನೀಡಿರುವ ಗಡುವಿನೊಳಗಾಗಿ ಜಿಲ್ಲಾಧಿಕಾರಿ ಸೂಚಿಸಿದ ಸ್ಥಳದಲ್ಲಿ ತಾತ್ಕಾಲಿಕ ಮೀನು ಮಾರುಕಟ್ಟೆ ಸ್ಥಾಪಿಸುವುದಾಗಿ ಪಂಚಾಯತ್ ಅಧ್ಯಕ್ಷ ರಮ್ಲಾನ್ ತಿಳಿಸಿದರು.
ಈ ಸಂದರ್ಭ ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಎಸೈ ಪ್ರಸನ್ನ, ಮಾಜಿ ತಾ.ಪಂ.ಸದಸ್ಯ ಆಸೀಫ್ ಇಕ್ಬಾಲ್ ಮತ್ತಿತರರು ಹಾಜರಿದ್ದರು.