9000 ಫೋನ್ಗಳು, 500 ಇಮೇಲ್ಗಳ ಮೇಲೆ ನಿಗಾ ಇರಿಸಿದ್ದ ಯುಪಿಎ ಸರಕಾರ: ಆರ್ಟಿಐಯಿಂದ ಬಹಿರಂಗ
ಹೊಸದಿಲ್ಲಿ, ಡಿ. 22: ಯುಪಿಎ ಸರಕಾರದ ಅವಧಿಯಲ್ಲಿ ಪ್ರತಿ ತಿಂಗಳು ಸುಮಾರು 7500-9,000 ಫೋನ್ಗಳು ಹಾಗೂ 300-500 ಇಮೇಲ್ ಖಾತೆಗಳ ಮೇಲೆ ಕಣ್ಗಾವಲು ಇರಿಸಲಾಗಿತ್ತು ಎಂದು ಆರ್ಟಿಆ ಒಂದಕ್ಕೆ ಪ್ರತ್ಯುತ್ತರ ದೊರಕಿದೆ.
ಕೇಂದ್ರದ ಮೋದಿ ಸರಕಾರ ಕಂಪ್ಯೂಟರ್ ಮಾಹಿತಿ ಮೇಲೆ ನಿಗಾ ಇರಿಸಲು 10 ಕೇಂದ್ರೀಯ ಸಂಸ್ಥೆಗಳಿಗೆ ಅಧಿಕಾರ ನೀಡಿದ ದಿನದ ಬಳಿಕ ಈ ಮಾಹಿತಿ ಬಹಿರಂಗಗೊಂಡಿದೆ. ಪ್ರಸೂನ್ಜಿತ್ ಮಂಡಲ್ ಅವರು ಸಲ್ಲಿಸಿದ ಆರ್ಟಿಐ ಪ್ರಶ್ನೆಗೆ ಗೃಹ ಸಚಿವಾಲಯ ಈ ಮಾಹಿತಿ ನೀಡಿದೆ.
‘‘ಪ್ರತಿ ತಿಂಗಳು ಸರಾಸರಿ 7,500ರಿಂದ 9,000 ಟೆಲಿಫೋನ್ಗಳು ಹಾಗೂ 300ರಿಂದ 500 ಈ ಮೇಲ್ ಖಾತೆಗಳ ಮೇಲೆ ಯುಪಿಎ ಸರಕಾರ ನಿಗಾ ಇರಿಸಿದೆ’’ ಎಂದು 2013 ಆಗಸ್ಟ್ 6ರಂದು ನೀಡಿದ ಪ್ರತಿಕ್ರಿಯೆಯಲ್ಲಿ ಸಚಿವಾಲಯ ತಿಳಿಸಿದೆ.
ಫೋನ್ ಹಾಗೂ ಈಮೇಲ್ ಮೇಲೆ ನಿಗಾ ಇರಿಸಲು ಐಬಿ, ಎನ್ಸಿಬಿ, ಇಡಿ, ಸಿಬಿಡಿಟಿ, ಡಿಆರ್ಐ, ಸಿಬಿಐ, ಎನ್ಐಎ, ಆರ್ಎಡಬ್ಲು ಹಾಗೂ ದಿಲ್ಲಿ ಪೊಲೀಸ್ ಕಮಿಷನರ್ ಸಹಿತ 10 ಕೇಂದ್ರ ಹಾಗೂ ರಾಜ್ಯದ ಸಂಸ್ಥೆಗಳ ಪಟ್ಟಿಯನ್ನು ಕೂಡ ಇದು ಬಹಿರಂಗಗೊಳಿಸಿದೆ.