ಧೂಮಪಾನಕ್ಕೆ ಹಠ ಹಿಡಿದ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿದರು
ಹೊಸದಿಲ್ಲಿ, ಡಿ.22: ವಿಮಾನದ ಕ್ಯಾಬಿನ್‌ನೊಳಗೆ ಧೂಮಪಾನ ಮಾಡಲು ಅವಕಾಶ ನೀಡಬೇಕೆಂದು ಹಠ ಹಿಡಿದ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿ ವಿಮಾನ ಸಂಚಾರ ಮುಂದುವರಿಸಿದ ಘಟನೆ ದಿಲ್ಲಿ ವಿಮಾನನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.
ವಿಸ್ತಾರಾ ವಿಮಾನಸಂಸ್ಥೆಯ ಯುಕೆ 707 ವಿಮಾನ ದಿಲ್ಲಿ ವಿಮಾನನಿಲ್ದಾಣದಿಂದ ಕೋಲ್ಕತಾಗೆ ತೆರಳಲು ಇನ್ನೇನು ಟೇಕ್ ಆಫ್ ಆಗಲಿದೆ ಎನ್ನುವಷ್ಟರಲ್ಲಿ ಈ ಘಟನೆ ನಡೆದಿದೆ. ದೇಶೀಯ ಹಾರಾಟದ ವಿಮಾನಗಳ ಒಳಗೆ ಪ್ರಯಾಣಿಕರು ಧೂಮಪಾನ ಮಾಡಲು ಅವಕಾಶವಿಲ್ಲ.
ವಿಮಾನದ ಒಳಗೆ ಧೂಮಪಾನ ನಡೆಸಲು ಹಠ ಹಿಡಿದ ಅಶಿಸ್ತಿನ ಪ್ರಯಾಣಿಕನಿಗೆ ವಿಮಾನದ ಕ್ಯಾಪ್ಟನ್ ಎಚ್ಚರಿಕೆಯ ಪತ್ರ ನೀಡಿದರು. ಆದರೂ ಆತ ನಿಯಮ ಉಲ್ಲಂಘನೆಗೆ ಮುಂದಾದಾಗ ಆತನನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಇದರಿಂದ ವಿಮಾನ ಸಂಚಾರದಲ್ಲಿ ಆಗಿರುವ ವಿಳಂಬಕ್ಕಾಗಿ ವಿಷಾದಿಸುತ್ತೇವೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಈ ವಿಮಾನ ದಿಲ್ಲಿ-ಅಮೃತಸರ ಮಾರ್ಗದಲ್ಲಿ ಹಾರಾಟ ನಡೆಸುತ್ತಿದ್ದಾಗ ಪ್ರಯಾಣಿಕರೊಬ್ಬರು ವೈಯಕ್ತಿಕ ತುರ್ತು ಕಾರ್ಯದ ನಿಮಿತ್ತ ವಿಮಾನದಿಂದ ಕೆಳಗಿಳಿಯಲು ಬಯಸಿದ್ದರು. ಆದ್ದರಿಂದ ಟೇಕ್ ಆಫ್ ಆಗಿ ಮುಂದೆ ಸಾಗಿದ್ದ ವಿಮಾನವನ್ನು ಅಲ್ಲಿಂದ ತಿರುಗಿಸಿ ಮತ್ತೆ ವಿಮಾನ ನಿಲ್ದಾಣಕ್ಕೆ ವಾಪಾಸು ತಂದು ಇಳಿಸಿದ ಕಾರಣ ಆಗಲೂ ಹಲವು ಗಂಟೆಗಳ ವಿಳಂಬವಾಗಿತ್ತು.