ಯುವಜನತೆ ಹೋರಾಟದ ಸ್ಪೂರ್ತಿಯನ್ನು ಮೈಗೂಡಿಸಿಕೊಳ್ಳಬೇಕು: ಲಬೀದ್ ಶಾಫಿ

ಮಂಗಳೂರು, ಡಿ. 23: ಒಂದು ದೇಶದ ಬದಲಾವಣೆಯು ವಿದ್ಯಾರ್ಥಿಗಳು ಹಾಗೂ ಯುವಜನತೆಯ ಕೈಯಲ್ಲಿದೆ. ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಯುವಜನತೆಯನ್ನು ನಿಯಂತ್ರಿಸುವಿಕೆಯ ಮೂಲಕ ಮೇಲುಗೈ ಸಾಧಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅನ್ಯಾಯ ಕಂಡಾಗ ಎಲ್ಲರನ್ನೂ ಒಗ್ಗೂಡಿಸಿ ಮುಂದುವರಿಯುವ ಹೋರಾಟದ ಸ್ಪೂರ್ತಿಯನ್ನು ದೇಶದ ಇಂದಿನ ಯುವಜನತೆ ಮೈಗೂಡಿಸಿಕೊಳ್ಳಬೇಕೆಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ (ಎಸ್.ಐ.ಒ) ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲಬೀದ್ ಶಾಫಿ ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಎಸ್.ಐ.ಒ. ದ.ಕ. ಜಿಲ್ಲೆಯ ವತಿಯಿಂದ ಕಂಕನಾಡಿಯಲ್ಲಿರುವ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಆಯೋಜಿ ಸಿದ್ದ ಸ್ವಾಗತ ಮತ್ತು ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡುತ್ತಿದ್ದರು.
ಇಂದು ದೇಶದಲ್ಲಿ ವ್ಯವಸ್ಥಿತವಾಗಿ ಫೇಕ್ ನ್ಯೂಸ್ ಹರಡಿ, ಆ ಮೂಲಕ ವ್ಯವಸ್ಥಿತವಾಗಿ ಕೊಲ್ಲುವಂತಹಾ ಘಟನೆಗಳು ನಡೆಯುತ್ತಿದ್ದರೂ, ದೇಶದ ಯುವಜನತೆ ಮಾತನಾಡದೆ ಸುಮ್ಮನಿದೆ. ಇದು ಹೀಗೆಯೇ ಮುಂದುವರಿದರೆ ದೇಶಕ್ಕೆ ಅಪಾಯ ಕಾದಿದೆ. ಯಾರು ನಮ್ಮ ಸಮಾಜದಲ್ಲಿ ಕೋಮುಗಲಭೆ, ಗುಂಪು ಹಲ್ಲೆಗಳಿಗೆ ಕಾರಣರಾಗುತ್ತಾರೋ ಹಾಗೂ ಇದರ ಹಿಂದೆ ಇರುವ ಎಲ್ಲರನ್ನೂ ಹೆಸರೆತ್ತಿ ಸಮಾಜದ ಮುಂದೆ ಇರಿಸಬೇಕಾದ ಅಗತ್ಯತೆ ಇದೆ ಎಂದು ಲಬೀದ್ ಶಾಫಿ ತಿಳಿಸಿದರು.
ಎಸ್.ಐ.ಒ. ಕರ್ನಾಟಕದ ನೂತನ ಅಧ್ಯಕ್ಷ ನಿಹಾಲ್ ಕಿದಿಯೂರು ಮಾತನಾಡಿ, ವಿದ್ಯಾರ್ಥಿಗಳು ಈ ಸಮಾಜದಲ್ಲಿ ನಡೆಯುತ್ತಿರುವಂತಹಾ ಪ್ರತಿಯೊಂದು ಘಟನೆಗಳ ಕುರಿತು ಮಾಹಿತಿ ಇರಬೇಕು. ಅನ್ಯಾಯದ ಸಂದರ್ಭದಲ್ಲಿ ನ್ಯಾಯದ ಪರವಾಗಿ ನಿಲ್ಲುವಂತಹಾ ವಿದ್ಯಾರ್ಥಿಗಳನ್ನು ಎಸ್ ಐ ಒ ಈ ಸಮಾಜಕ್ಕೆ ನೀಡಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಮಾಜದ ಪುನರ್ ನಿರ್ಮಾಣದ ಭಾಗವಾಗಿ ತರಬೇತಿ ನೀಡಲು ಆದ್ಯತೆ ನೀಡುವುದಾಗಿ ತಿಳಿಸಿದರು.
ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಜಿ.ಐ.ಒ ಕರ್ನಾಟಕ ರಾಜ್ಯಾಧ್ಯಕ್ಷೆಯಾಗಿ ಆಯ್ಕೆಯಾದ ಉಮೈರಾ ಬಾನು, ಎಸ್.ಐ.ಒ ಮಾಜಿ ರಾಷ್ಟ್ರೀಯ ಅಧ್ಯಕ್ಷ ಅಶ್ಫಾಕ್ ಅಹ್ಮದ್ ಶರೀಫ್ ಮಾತನಾಡಿದರು.
ನೂತನ ಅಧ್ಯಕ್ಷರುಗಳಿಗೆ ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಎಸ್.ಐ.ಒ. ದ.ಕ. ಜಿಲ್ಲೆಯ ವತಿಯಿಂದ ಇದೇ ವೇಳೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾಧ್ಯಕ್ಷ ಅಮೀನ್ ಅಹ್ಸನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕರಾದ ಅಬ್ದುಸ್ಸಲಾಂ ಉಪ್ಪಿನಂಗಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್.ಐ.ಒ. ದ.ಕ. ಜಿಲ್ಲಾಧ್ಯಕ್ಷ ಅಹ್ಮದ್ ಮುಬೀನ್ ಪ್ರಸ್ತಾವನೆಗೈದು , ಸ್ವಾಗತಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕೆ.ಎಂ, ಹಿರಿಯರಾದ ಕೆ.ಎಂ.ಶರೀಫ್, ಸೋಲಿಡಾರಿಟಿ ಯೂತ್ ಮೂಮೆಂಟ್ ನ ಶಬ್ಬೀರ್, ಫರ್ವೇಝ್ ಮಂಗಳೂರು, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ದ.ಕ. ಜಿಲ್ಲಾ ಸಂಚಾಲಕಿ ಝೀನತ್ ಹಸನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್.ಐ.ಒ. ದ.ಕ. ಜಿಲ್ಲಾ ಕಾರ್ಯದರ್ಶಿ ನಿಝಾಮ್ ಉಳ್ಳಾಲ್ ವಂದಿಸಿದರು. ಖಾಸಿಮ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.