ಸರಕಾರದ ನೆರವನ್ನೇ ಪಡೆಯದೆ ಕೃಷಿಯಲ್ಲಿ ಗೆದ್ದ ಪ್ರಶಸ್ತಿ ಪುರಸ್ಕೃತ ಮೂಕಪ್ಪ

ಇಂದು ಕಿಸಾನ್ ದಿನ: ಈ ಹಿನ್ನೆಲೆಯಲ್ಲಿ ನಾಡಿನ ವಿವಿಧ ರೈತರನ್ನು ಪತ್ರಿಕೆ ಸಂದರ್ಶನ ಮಾಡಿದೆ. ಅವರ ಸಾಧನೆ, ಕೃಷಿಯ ಅನುಭವಗಳು, ಎದುರಿಸುತ್ತಿರುವ ಸವಾಲು, ಕೃಷಿಯ ಮೂಲಕ ಅವರು ಕಟ್ಟಿಕೊಂಡಿರುವ ಬದುಕನ್ನು ರೈತರು ಹಂಚಿಕೊಂಡಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿನ್ನಕಟ್ಟಿ ಗ್ರಾಮದ ಪ್ರಗತಿಪರ ರೈತ ಮೂಕಪ್ಪ ಶಿವಪ್ಪ ಪೂಜಾರ ಕೃಷಿ ಕ್ಷೇತ್ರದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ‘ಮೆಟ್ಟಿ ರಾಗಿ’ ಬೆಳೆಯಲ್ಲಿ ಉತ್ತಮ ಇಳುವರಿ ತೆಗೆಯುವ ಮೂಲಕ ರಾಷ್ಟ್ರ, ರಾಜ್ಯದ ರೈತರು ಇವರತ್ತ ಮುಖಮಾಡಿ ನೋಡುವ ಹಾಗೆ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಇವರ ಕೃಷಿ ಸಾಧನೆ ಗುರುತಿಸಿ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ವಾರ್ತಾ ಭಾರತಿಯೊಂದಿಗೆ ಕೃಷಿ ಕುರಿತು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡಿದ್ದು ಹೀಗೆ.
►ನೀವು ಮಾಡುತ್ತಿರುವ ಪ್ರಮುಖ ಕೃಷಿ ಯಾವುದು? ಎಷ್ಟು ಸಮಯದಿಂದ ಮಾಡುತ್ತಿದ್ದೀರಿ? ಇದು ನಿಮ್ಮ ಬದುಕಿಗೆ ಎಷ್ಟರ ಮಟ್ಟಿಗೆ ಪ್ರಯೋ ಜನಕಾರಿ, ಲಾಭ ದಾಯಕವಾಗಿದೆ?
ಚಿಕ್ಕವನಿದ್ದಾಗಿನಿಂದಲೂ ತಂದೆಯೊಂದಿಗೆ ಕೃಷಿ ಮಾಡುತ್ತಾ ಬಂದ ನನಗೆ ಈಗ 70 ವರ್ಷ ವಯಸ್ಸು. ಒಂದು ಎಕರೆಯಲ್ಲಿ ಕೇವಲ 6ರಿಂದ 8 ಕ್ವಿಂಟಾಲ್ ಬೆಳೆಯುತ್ತಿದ್ದ ರಾಗಿ ಬೆಳೆಯನ್ನು ಈಗ ಒಂದು ಕೆಜಿ ರಾಗಿ ಬಿತ್ತನೆ ಮಾಡಿ 18ರಿಂದ 20 ಕ್ವಿಂಟಾಲ್ ಬೆಳೆದು ರಾಷ್ಟ್ರ, ರಾಜ್ಯದ ರೈತರು ನನ್ನತ್ತ ಮುಖಮಾಡುವ ಹಾಗೆ ಮಾಡಿದ್ದೇನೆ. ಕೃಷಿಯಿಂದ ನನಗೆ ಪ್ರತಿವರ್ಷ 3-4 ಲಕ್ಷ ರೂ.ಗೂ ಅಧಿಕ ಆದಾಯ ಬರುತ್ತದೆ.
►ಕೃಷಿಯನ್ನೇ ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣವೇನು?
ಮೂಲತಃ ನಮ್ಮದು ಕೃಷಿ ಕುಟುಂಬವಾದ್ದರಿಂದ ನಾನು ಕೃಷಿಯನ್ನೇ ಆಯ್ಕೆ ಮಾಡಿಕೊಂಡೆ. ಹಿರಿಯರು ಮಾಡಿಕೊಂಡು ಬಂದ ಕೃಷಿ ಪದ್ಧತಿಯಲ್ಲಿ ಬದಲಾವಣೆ ತಂದು ಕೃಷಿಯಲ್ಲಿ ಸಾಧನೆ ಮಾಡಬೇಕು ಎಂಬ ಕಾರಣದಿಂದ ಕೃಷಿಯನ್ನೇ ಆಯ್ಕೆ ಮಾಡಿಕೊಂಡೆ.
►ಆರಂಭದಲ್ಲಿ ನೀವು ಎದುರಿಸಿದ ಸವಾಲುಗಳು ಏನೇನು?
ಇದರ ಸೋಲು ಗೆಲುವುಗಳನ್ನು ಹಂಚಿ ಕೊಳ್ಳಿ. ಮೂಲತಃ ನಮ್ಮದು ಕೃಷಿ ಕುಟುಂಬವಾಗಿದ್ದರಿಂದ ಯಾವುದೇ ತೊಂದರೆ ಆಗಲಿಲ್ಲ. ಆದರೆ ನಮ್ಮ ಹಿರಿಯರು ಮಾಡಿಕೊಂಡು ಬರುವಂತ ಕೃಷಿ ಪದ್ಧತಿಯಿಂದ ಕಡಿಮೆ ಉತ್ಪನ್ನ ತೆಗೆಯುತ್ತಿದ್ದೆ. ನಂತರ ನಾನು ಕಂಡುಕೊಂಡ ಕೃಷಿ ಪದ್ಧತಿಯಿಂದ ಹೆಚ್ಚು ಲಾಭ ಪಡೆದು ಗೆಲುವು ಸಾಧಿಸಿದೆ.
►ಸಾವಯವ ಗೊಬ್ಬರಗಳನ್ನು ಬಳಸಿ ಮಾಡುವ ಕೃಷಿ ಕುರಿತು ನಿಮ್ಮ ಅನಿಸಿಕೆ? ಇದರಿಂದ ರೈತ ಯಶಸ್ವಿಯಾಗಬಹುದೇ?
ಸಾವಯವ ಕೃಷಿಯನ್ನು ಪ್ರತಿಯೊಬ್ಬ ರೈತ ಅನುಸರಿಸಬೇಕು. ಏಕೆಂದರೆ ಭೂಮಿಯನ್ನು ನಾವು ಕಾಪಾಡಿದರೆ ನಮ್ಮನ್ನು ಅದು ಕಾಪಾಡುತ್ತದೆ. ರೈತ ಸಾವಯವ ಕೃಷಿಯಿಂದ ಸ್ವಾದಿಷ್ಟ, ಸುಂಗಧ ಭರಿತ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಪ್ರತಿವರ್ಷ ಉತ್ತಮ ಫಸಲನ್ನು ಪಡೆಯಬಹುದಾಗಿದೆ.
►ಸರಕಾರ ನಿಮಗೆ ಯಾವ ರೀತಿಯಲ್ಲಿ ನೆರವಾಗುತ್ತಿದೆ?
ನಾನು ಯಾರ ಸಹಾಯವನ್ನೂ ಕೇಳದೆ ಸ್ವಾವಲಂಭಿ ಜೀವನ ಸಾಗಿಸಿಕೊಂಡ ಬಂದವನು. ಸರಕಾರದಿಂದ ಯಾವುದೇ ನೆರವನ್ನು ಪಡೆದಿಲ್ಲ. ನಾನು ಯಾವುದೇಹಣಕ್ಕೂ, ಪ್ರಶಸ್ತಿಗೂ ಆಸೆ ಪಟ್ಟವನಲ್ಲ. ಕಳೆದ ತಿಂಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರು ನನ್ನ ಕೃಷಿ ಸಾಧನೆ ಗುರುತಿಸಿ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ.
►ರೈತರ ಹೆಸರಲ್ಲಿ ರೈತರಲ್ಲದವರು ಸರಕಾರದ ನೆರವನ್ನು ದೋಚುತ್ತಿದ್ದಾರೆ ಎಂಬ ಆರೋಪ ಇದೆ. ನಿಜವೇ?
ರೈತ ಭೂಮಿತಾಯಿ ಹೆಸರಿನಲ್ಲಿ ಸಾಲ ತೆಗೆದು ಸರಕಾರಕ್ಕೆ ವಂಚನೆ ಮಾಡುವುದು ದೊಡ್ಡ ಅಪರಾಧ. ಜಮೀನಿನಲ್ಲಿ ನಾಲ್ಕೈದು ಗಿಡಗಳು ಬಾಡಿದರೆ ಅದರ ಫೋಟೊ ತೆಗೆದು ಬೆಳೆಹಾನಿ ತೆಗೆದುಕೊಳ್ಳುವ ರೈತರನ್ನೂ ನಾನು ಕಣ್ಣಾರೆ ಕಂಡಿದ್ದೇನೆ. ಈ ರೀತಿಯ ಮೋಸ ಮಾಡದೆ ರೈತ ಪ್ರಾಮಾಣಿಕವಾಗಿ ಭೂಮಿ ಹೆಸರಿನಲ್ಲಿ ತೆಗೆದುಕೊಂಡ ಸಾಲವನ್ನು ಮರಳಿಸಿ ಋಣಮುಕ್ತನಾಗಬೇಕು.
►ರೈತರ ಸಾಲ ಮತ್ತು ಆತ್ಮಹತ್ಯೆ ಕುರಿತು ನಿಮ್ಮ ಅಭಿಪ್ರಾಯ ಏನು?
ಇಂದಿನ ಹೆಚ್ಚಿನ ರೈತರು ಶೋಕಿ ಜೀವನಕ್ಕಾಗಿ ಅತಿಯಾದ ಸಾಲ ಮಾಡಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತ ‘ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ತನ್ನ ಜಮೀನಿನಲ್ಲಿ ಎಷ್ಟು ಪ್ರಮಾಣದ ಬೆಳೆ ಬೆಳೆಯಬಹುದು. ಯಾವ ಬೆಳೆ ಬೆಳೆದರೆ ಲಾಭವಾಗುತ್ತದೆ ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ಕೃಷಿ ಮಾಡಬೇಕು. ಆಂದಾಗ ಮಾತ್ರ ರೈತ ಸಾಲಗಾರನಾಗುವುದಿಲ್ಲ.
►ಸರಕಾರದಿಂದ ಮತ್ತು ಸಮಾಜದಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ.
ರಾಜಕಾರಣಿಗಳು ಅಧಿಕಾರದ ಆಸೆಗೆ ರೈತನಿಗೆ ಇಲ್ಲಸಲ್ಲದ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ರೈತರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ. ರೈತ ರಾಷ್ಟ್ರದ ಬೆನ್ನೆಲುಬು ಎಂದು ರಾಜಕಾರಣಿಗಳು ಹೇಳುತ್ತಾ ರೈತನ ಬೆನ್ನೆಲುಬನ್ನೇ ಮುರಿದಿದ್ದಾರೆ. ಇನ್ನು ಸಮಾಜ ಸಾವಯವ ಕೃಷಿಕಡೆ ಹೆಚ್ಚು ಒಲವು ತೋರಿಸಿ ಕೃಷಿಯನ್ನು ಮುಂದಿನ ಪೀಳಿಗೆಗಳಿಗೆ ಪರಿಚಯಿಸಬೇಕು.
►ಕೃಷಿಯಿಂದ ನೀವು ಸಂತೃಪ್ತರೇ?
ನಾನು ಸಂತೃಪ್ತ. ನಾನು ಮಾಡುವ ಕೃಷಿ ಪದ್ಧತಿ ಇತರರಿಗೂ ಮಾದರಿಯಾಗಲಿ ಎಂಬ ಕಾರಣಕ್ಕೆ ರಾಷ್ಟ್ರ, ರಾಜ್ಯಾದ್ಯಂತ ಇದನ್ನು ಪರಿಚಯಿಸುತ್ತಿದೇನೆ. ಅಲ್ಲದೆ ಸುಮಾರು 10ರಿಂದ 15 ಸಾವಿರ ರೈತರಿಗೆ ಸಾವಯವ ಕೃಷಿ ಮೂಲಕ ‘ಮೆಟ್ಟಿರಾಗಿ’ ಹೇಗೆ ಬೆಳೆಯಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದ್ದೇನೆ. ನಾನು ಹೇಳಿದ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಮೂರ್ನಾಲ್ಕು ಪುಸ್ತಕಗಳು ಬಿಡುಗಡೆಯಾಗಿವೆ.
►ನಿಮ್ಮ ಆನಂತರ ಈ ಕೃಷಿ ಮುಂದುವರಿಯಬಹುದೇ?
ನಮ್ಮದು ಕೂಡು ಕುಟುಂಬ. ನನ್ನ ನಂತರ ಕೃಷಿಯನ್ನು ಮಕ್ಕಳು ಮುಂದುವರಿಸಿಕೊಂಡು ಹೋಗುತ್ತಾರೆ. ಅವರಿಗೂ ನಾನು ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿದ್ದೇನೆ.








