ಮೊದಲು ನಿಮ್ಮ ದೇಶವನ್ನು ನೋಡಿಕೊಳ್ಳಿ: ಪಾಕ್ ಪ್ರಧಾನಿಗೆ ನಾಸಿರುದ್ದೀನ್ ಶಾ ತೀಕ್ಷ್ಣ ಪ್ರತಿಕ್ರಿಯೆ

ಹೊಸದಿಲ್ಲಿ, ಡಿ.23: ಭಾರತದಲ್ಲಿ ಗುಂಪು ಹಿಂಸಾಚಾರದ ಬಗ್ಗೆ ಖ್ಯಾತ ನಟ ನಾಸಿರುದ್ದೀನ್ ಶಾ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಅಲ್ಪಸಂಖ್ಯಾತರನ್ನು ಹೇಗೆ ಪರಿಗಣಿಸಬೇಕು ಎಂದು ನಮ್ಮ ಸರ್ಕಾರ ಮೋದಿಯವರಿಗೆ ತೋರಿಸಿಕೊಡಲಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಸಿರುವ ನಾಸಿರುದ್ದೀನ್ ಶಾ, ಇಂಡಿಯನ್ ಎಕ್ಸ್‍ಪ್ರೆಸ್ ಜತೆ ಮಾತನಾಡಿ, "ಖಾನ್ ತಮಗೆ ಸಂಬಂಧವಿಲ್ಲದ ವಿಷಯದಿಂದ ಹೊರಗುಳಿಯಲಿ" ಎಂದು ಹೇಳಿದ್ದಾರೆ.
ಭಾರತದಲ್ಲಿ ಕೂಡಾ ಅಲ್ಪಸಂಖ್ಯಾತರನ್ನು ಸಮಾನ ಪ್ರಜೆಗಳಂತೆ ಪರಿಗಣಿಸುತ್ತಿಲ್ಲ ಎಂದು ಜನ ಹೇಳುತ್ತಿದ್ದಾರೆ ಎಂದು ಖಾನ್ ಲಾಹೋರ್‍ನಲ್ಲಿ ಸಮಾರಂಭವೊಂದರಲ್ಲಿ ಅಭಿಪ್ರಾಯಪಟ್ಟಿದ್ದರು. ಆದರೆ ತಮ್ಮ ಸರ್ಕಾರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪಾಕಿಸ್ತಾನದಲ್ಲಿ ತಮ್ಮ ಹಕ್ಕನ್ನು ಖಾತ್ರಿಪಡಿಸಲು ಶ್ರಮಿಸುತ್ತಿದೆ ಎಂದು ಹೇಳಿದ್ದರು. ನ್ಯಾಯ ನಿರಾಕರಿಸುವುದು ದಂಗೆಗೆ ಕಾರಣವಾಗುತ್ತದೆ ಎಂದು ಹೇಳಿ ಬಾಂಗ್ಲಾದೇಶ ಉದಾಹರಣೆ ನೀಡಿದ್ದರು. ಶಾ ಅವರ ಹೇಳಿಕೆ, ಪಾಕಿಸ್ತಾನದ ಜನಕ ಮುಹಮ್ಮದ್ ಅಲಿ ಜಿನ್ಹಾ ಅವರು ಸ್ವಾತಂತ್ರ್ಯದ ಬಳಿಕ ಭಾರತದ ಮುಸ್ಲಿಮರ ಬಗ್ಗೆ ವ್ಯಕ್ತಪಡಿಸಿದ್ದ ಆತಂಕವನ್ನು ಪ್ರತಿಬಿಂಬಿಸಿದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನಾಸಿರುದ್ದೀನ್ ಶಾ, "ಇಮ್ರಾನ್‍ಖಾನ್ ಅವರು ತಮಗೆ ಸಂಬಂಧವಿಲ್ಲದ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು, ತಮ್ಮ ದೇಶದ ಬಗ್ಗೆ ನೋಡಿಕೊಳ್ಳಲಿ. ನಾವು ಸ್ವಾತಂತ್ರ್ಯ ಪಡೆದು 70 ವರ್ಷಗಳಾಗಿದ್ದು, ನಮ್ಮನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ನಮಗೆ ಗೊತ್ತು" ಎಂದು ಹೇಳಿದ್ದರು. ಈ ಮಧ್ಯೆ ರಾಜಸ್ಥಾನ ಸಾಹಿತ್ಯ ಸಮ್ಮೇಳನದಲ್ಲಿ ನಾಸಿರುದ್ದೀನ್ ಶಾ ಅವರ ಕಾರ್ಯಕ್ರಮವನ್ನು ಅವರ ವಿರುದ್ಧದ ಪ್ರತಿಭಟನೆ ಹಿನ್ನೆಲೆಯಲ್ಲಿ ರದ್ದುಪಡಿಸಿದ ಸಂಘಟಕರ ಕ್ರಮವನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ.