ಬಿಹಾರ ಲೋಕಸಭಾ ಚುನಾವಣೆ: ಬಿಜೆಪಿ,ಜೆಡಿಯು, ಎಲ್‌ಜೆಪಿ ಸೀಟು ಹಂಚಿಕೆ ಸೂತ್ರ ಪ್ರಕಟ
ಹೊಸದಿಲ್ಲಿ, ಡಿ.23: ಬಿಜೆಪಿ ಅಧ್ಯಕ್ಷ ಅಮಿತ್ ಶಾ ರವಿವಾರ ಮುಂಬರುವ ಲೋಕಸಭಾ ಚುನಾವಣೆಗೆ ಬಿಹಾರ ರಾಜ್ಯದ ಸೀಟು ಹಂಚಿಕೆ ಸೂತ್ರವನ್ನು ಪ್ರಕಟಿಸಿದ್ದಾರೆ. ಇದರ ಪ್ರಕಾರ ಬಿಜೆಪಿ ಹಾಗೂ ಜೆಡಿಯು ತಲಾ 17 ಕ್ಷೇತ್ರಗಳಲ್ಲಿ ಹಾಗೂ ಎಲ್‌ಜೆಪಿ ಆರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಶಾ, ಲೋಕ ಜನಶಕ್ತಿ ಪಕ್ಷ(ಎಲ್‌ಜೆಪಿ)ಮುಖ್ಯಸ್ಥ ರಾಮ್‌ವಿಲಾಸ್ ಪಾಸ್ವಾನ್‌ರನ್ನು ಎನ್‌ಡಿಎಯ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಲಾಗುತ್ತದೆ ಎಂದರು.
ಉಪೇಂದ್ರ ಕುಶ್ವಾಹ್ ಎನ್‌ಡಿಎ ಮೈತ್ರಿಕೂಟ ತೊರೆದ ಕಾರಣ ಎರಡು ಸ್ಥಾನ ತೆರವಾಗಿದ್ದು, ಈ ಸ್ಥಾನ ತನಗೆ ನೀಡಬೇಕೆಂದು ಎಲ್‌ಜೆಪಿ ಹೊಸ ಬೇಡಿಕೆ ಇಟ್ಟಿತ್ತು.
ಅಮಿತ್ ಶಾ ಹಾಗೂ ಪಕ್ಷದ ಬಿಹಾರ ಉಸ್ತುವಾರಿ ಭೂಪೇಂದ್ರ ಯಾದವ್‌ರೊಂದಿಗೆ ಗುರುವಾರ ಎಲ್‌ಜೆಪಿ ಹಲವು ಸುತ್ತಿನ ಮಾತುಕತೆ ನಡೆಸಿತ್ತು. ಸೀಟು ಹಂಚಿಕೆ ಸೂತ್ರ ಪ್ರಕಟವಾಗುವುದರೊಂದಿಗೆ ಎಲ್ಲ ಗೊಂದಲಕ್ಕೆ ತೆರೆ ಬಿದ್ದಿದೆ. ಬಿಜೆಪಿಗೆ ಮೈತ್ರಿಕೂಟ ಎಷ್ಟು ಮುಖ್ಯ ಎಂಬ ಅಂಶ ಎಲ್‌ಜೆಪಿಯೊಂದಿಗಿನ ಹೊಂದಾಣಿಕೆ ಉದಾಹರಣೆಯಾಗಿದೆ.