ಪ್ರತಿಭಟನಕಾರರು ಇರುಮುಡಿ ಕಸಿದುಕೊಂಡರು: ಶಬರಿಮಲೆಯಲ್ಲಿ ಮಹಿಳಾ ಯಾತ್ರಾರ್ಥಿಗಳ ಆರೋಪ

ಪಂಬಾ (ಕೇರಳ), ಡಿ.23: ಶಬರಿಮಲೆ ಬೆಟ್ಟದ ತಪ್ಪಲಿನ ಪಂಬಾ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಈ ಮಧ್ಯೆ ಎನ್ ಡಿಟಿವಿ ಜತೆ ಮಾತನಾಡಿದ ಮಹಿಳಾ ಭಕ್ತರು, ಪ್ರತಿಭಟನಾಕಾರ ಪುರುಷರು ತಮ್ಮ ಇರುಮುಡಿ ಕಸಿದುಕೊಂಡಿದ್ದಾರೆ ಎಂದು ದೂರಿದ್ದಾರೆ.
ಋತುಸ್ರಾವದ ವಯಸ್ಸಿನವರಾದ ಈ ಮಹಿಳೆಯರು, ಅಯ್ಯಪ್ಪ ದರ್ಶನಕ್ಕೆ ಪಟ್ಟು ಹಿಡಿದಿದ್ದು, ಋತುಸ್ರಾವದ ಅವಧಿ ಮುಗಿದು ಅಯ್ಯಪ್ಪ ದರ್ಶನ ಮಾಡಬೇಕು ಎಂದಾದರೆ 50 ವರ್ಷ ಕಳೆಯುವವರೆಗೂ ನಾವು ಬದುಕುತ್ತೇವೆ ಎಂಬ ಖಾತರಿ ಏನು ಎಂದು ಪ್ರಶ್ನಿಸಿದ್ದಾರೆ.
ಮುಂಜಾನೆಯಿಂದಲೇ ಪ್ರತಿಭಟನಾಕಾರರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ಶಬರಿಮಲೆ ಯಾತ್ರೆ ಕೈಗೊಳ್ಳುವ ಸಲುವಾಗಿ ಮುಂಜಾನೆ 3 ಗಂಟೆಯ ಸುಮಾರಿಗೆ 11 ಮಂದಿ ಮಹಿಳೆಯರು ಪಂಬಾ ತಲುಪಿದ್ದಾರೆ..
"ನಾವು ಅಯ್ಯಪ್ಪದೇವರ ಸಹೋದರಿಯರು; ಶಬರಿಮಲೆಯಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎನ್ನುವುದು ನಮ್ಮ ಬದ್ಧತೆ. ನಮಗೂ ಸಮಾನ ಹಕ್ಕು ಇದೆ. ಪಂಬಾದಲ್ಲಿ ಅರ್ಚಕರು ನಮಗೆ ಇರುಮುಡಿ ನೀಡಲು ನಿರಾಕರಿಸಿದ್ದಾರೆ. ಪ್ರತಿಭಟನಾಕಾರರು ನಮ್ಮ ಇರುಮುಡಿ ಕಸಿದುಕೊಂಡರು" ಎಂದು ತಿಲಗಾವತಿ ಎಂಬ ಮಹಿಳೆ ಎನ್‍ಡಿಟಿವಿಗೆ ತಿಳಿಸಿದರು.
"ಕಠಿಣ ಉಪವಾಸ ವ್ರತ ಸೇರಿದಂತೆ ಎಲ್ಲ ಸಂಪ್ರದಾಯಗಳನ್ನು ನಾವು ನಿರ್ವಹಿಸಿದ್ದೇವೆ. ಪೊಲೀಸರು ನಮ್ಮನ್ನು ಶಬರಿಮಲೆಗೆ ಕರೆದೊಯ್ಯುವ ಭರವಸೆ ನೀಡಿದ್ದಾರೆ. ಇನ್ನಷ್ಟು ಮಹಿಳೆಯರು ಮಾರ್ಗ ಮಧ್ಯದಲ್ಲಿದ್ದಾರೆ" ಎಂದು ಅವರು ವಿವರಿಸಿದ್ದಾರೆ.







