ಮಂಗಳೂರು: ಪಿಎಫ್‌ಐ ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು, ಡಿ.23: ಆರ್ಥಿಕವಾಗಿ ತೀರಾ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಪಿಎಫ್‌ಐ ರಾಜ್ಯ ಸಮಿತಿಯ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ವೇತನದ ವಿತರಣಾ ಕಾರ್ಯಕ್ರಮವು ರವಿವಾರ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಡಪದವು ಮುಹಮ್ಮದ್ ಬ್ಯಾರಿ ‘ಮುಸ್ಲಿಂ ಸಮಾಜದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿದೆ. ಅದರಲ್ಲೂ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಹೆತ್ತವರು ವಿಶೇಷ ಮುತುವರ್ಜಿ ವಹಿಸುತ್ತಿದ್ದಾರೆ. ಆದರೆ, ಶಿಕ್ಷಣದಲ್ಲಿ ಮುಸ್ಲಿಂ ಹುಡುಗರ ಸಾಧನೆ ನಿರೀಕ್ಷಿಸಿದಷ್ಟು ಇಲ್ಲ. ಸಮಾಜದ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸುವ ಮುಸ್ಲಿಂ ಯುವಕರು ಶಿಕ್ಷಣದ ಬಗ್ಗೆಯೂ ಒಲವು ತೋರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಿಎಫ್‌ಐಯಂತಹ ಸಾಮಾಜಿಕ ಸಂಘಟನೆಗಳು ನೀಡುತ್ತಿರುವ ಇಂತಹ ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಪಡೆದುಕೊಳ್ಳಬೇಕಿದೆ ಎಂದರು.
ಪಿಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಹನೀಫ್ ಕಾಟಿಪಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಕ್ರಿಯೇಟಿವ್ ಫೌಂಡೇಶನ್‌ನ ನಝೀರ್ ಐಬ ಮಾತನಾಡಿದರು. ಸುರತ್ಕಲ್ ಮಸೀದಿಯ ಅಧ್ಯಕ್ಷ ಅಝೀಝ್ ಸುರತ್ಕಲ್ ಉಪಸ್ಥಿತರಿದ್ದರು.
ಪಿಎಫ್‌ಐ ರಾಜ್ಯ ಸಮಿತಿಯ ಸದಸ್ಯ ಅಯ್ಯೂಬ್ ಅಗ್ನಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಝಾಹಿದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು. ಮುನೀಬ್ ಬೆಂಗರೆ ವಂದಿಸಿದರು.
ರಾಜ್ಯದ 9 ಕಡೆಗಳಲ್ಲಿ 490 ವಿದ್ಯಾರ್ಥಿಗಳಿಗೆ ಸುಮಾರು 30 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ಕೊಡಲಾಗುತ್ತಿದ್ದು, ಆ ಪೈಕಿ ರವಿವಾರ ಮಂಗಳೂರಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 130 ವಿದ್ಯಾರ್ಥಿಗಳಿಗೆ 6 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.