ಕಾಂಗ್ರೆಸ್ ಮುಖಂಡರ ಸಮಜಾಯಿಷಿ ಸರಿಯಿಲ್ಲ: ರಾಮಲಿಂಗಾ ರೆಡ್ಡಿ

ಬೆಂಗಳೂರು, ಡಿ.23: ಹಿರಿಯರು ಎಂಬ ಕಾರಣಕ್ಕೆ ಸಚಿವ ಸಂಪುಟದಿಂದ ಕೈ ಬಿಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಸಮಜಾಯಿಸಿ ಕೊಡುತ್ತಾರೆ. ಆದರೆ, ಸಂಪುಟದಲ್ಲಿ ಇನ್ನು ಕೆಲ ಹಿರಿಯರು ಇದ್ದಾರೆ. ಅವರಿಗೊಂದು ನ್ಯಾಯ, ನನಗೊಂದು ನ್ಯಾಯವೆ ಎಂದು ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಡಾ.ಜಿ.ಪರಮೇಶ್ವರ್, ಡಿ.ಕೆ. ಶಿವಕುಮಾರ್ ಕೂಡ ಹಿರಿಯ ರಾಜಕಾರಣಿಗಳೆ. ಒಂದಕ್ಕಿಂತ ಹೆಚ್ಚು ಬಾರಿ ಅವರೂ ಮಂತ್ರಿಗಳಾಗಿದ್ದಾರೆ. ಆದರೆ, ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ಏಕೆ ಎಂದರು.
ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ನನ್ನ ವಿರುದ್ಧ ಪಿತೂರಿ ಮಾಡುವವರಿದ್ದಾರೆ. ಅವರ ಹೆಸರನ್ನು ಹೇಳುವ ಅಗತ್ಯವಿಲ್ಲ. ಆದರೂ ನನಗೆ ಸಚಿವ ಸ್ಥಾನ ಕೇಳಿಲ್ಲ. ಆದರೆ, ಸಚಿವ ಸ್ಥಾನ ನೀಡುವುದಕ್ಕೆ ಅನುಸರಿಸಿದ ಮಾನದಂಡಗಳ ಬಗ್ಗೆ ಅನುಮಾನವಿದೆ ಎಂದು ಅವರು ತಿಳಿಸಿದರು.
ಸಂಪುಟ ವಿಸ್ತರಣೆಯಾಗುವ ಮುನ್ನವೂ ನನ್ನನ್ನು ಯಾವ ನಾಯಕರೂ ಸಂಪರ್ಕ ಮಾಡಿಲ್ಲ. ಈಗ ಸಂಪುಟ ವಿಸ್ತರಣೆಯಾದ ಬಳಿಕವೂ ನನ್ನನ್ನು ಯಾರೂ ಭೇಟಿ ಮಾಡಿಲ್ಲ. ಕನಿಷ್ಠ ಸೌಜನ್ಯಕ್ಕಾದರು ಕಾಂಗ್ರೆಸ್‌ನ ಯಾವ ನಾಯಕರೂ ನನ್ನೊಂದಿಗೆ ಮಾತುಕತೆ ನಡೆಸಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸಚಿವ ಸ್ಥಾನದ ವಂಚಿತ ಶಾಸಕರನ್ನು ಬಿಜೆಪಿಯವರು ಸಂಪರ್ಕಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದವರೇ ನನ್ನನ್ನು ಮಾತನಾಡಿಸಿಲ್ಲ. ಇನ್ನು ಬೇರೆ ಪಕ್ಷದವರು ನನ್ನ ಮಾತನಾಡಿಸುತ್ತಾರೆಯೆ. ನಾನು ಮೂಲತಃ ಕಾಂಗ್ರೆಸಿಗ. ಯಾರೂ ನನ್ನನ್ನು ಟಚ್ ಮಾಡಲು ಸಾಧ್ಯವಿಲ್ಲವೆಂದು ಅವರು ತಿಳಿಸಿದರು.
ಸಚಿವ ಸ್ಥಾನ ಕೈಬಿಟ್ಟಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಇದರಲ್ಲಿ ಯಾವುದೆ ಅನುಮಾನ ಬೇಡ.
-ರಾಮಲಿಂಗಾ ರೆಡ್ಡಿ, ಹಿರಿಯ ಶಾಸಕ







