ಉಡುಪಿ: ಬೆಂಕಿ ಆಕಸ್ಮಿಕ; ಇನ್ನೋವಾ ಕಾರು ಭಸ್ಮ

ಉಡುಪಿ, ಡಿ.23: ನಗರದ ವೈಟ್‌ಲೋಟಸ್ ಹೊಟೇಲ್ ಎದುರುಗಡೆ ನಿಲ್ಲಿಸಿದ ಇನ್ನೋವಾ ಕಾರೊಂದು ವೈಯರಿಂಗ್‌ನಲ್ಲಿನ ಶಾರ್ಟ್‌ಸರ್ಕಿಟ್‌ನಿಂದ ಬೆಂಕಿಗೆ ಅಹುತಿಯಾದ ಘಟನೆ ರವಿವಾರ ನಡೆದಿದೆ.
ಬೆಂಗಳೂರಿನ ಚಲನ್ ಗೌಡ ಎಂಬವರ ರೈಡರ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಈ ಕಾರಿನಲ್ಲಿ ಚಾಲಕ ಬೀದರ್ ಜಿಲ್ಲೆಯ ಬಸವಕಲ್ಯಾಣದ ಗಣೇಶ್ ಗುಲ್ಶನ್ ಎಂಬವರು ಪ್ರಯಾಣಿಕರನ್ನು ಬಾಡಿಗೆಗಾಗಿ ಉಡುಪಿಗೆ ಕರೆದುಕೊಂಡು ಬಂದಿದ್ದರು. ನಿನ್ನೆ ರಾತ್ರಿ ಹೊಟೇಲ್ ಎದುರುಗಡೆ ಕಾರನ್ನು ನಿಲ್ಲಿಸಲಾಗಿತ್ತು. ಇಂದು ಬೆಳಗ್ಗೆ ಕಾರಿನ ಕಂಡೆನ್ಸರ್‌ನ ವಯರಿಂಗ್‌ನಲ್ಲಿ ಉಂಟಾದ ಶಾರ್ಟ್ ಸರ್ಕಿಟ್‌ನಿಂದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದರಿಂದ ಕಾರು ಸಂಪೂರ್ಣ ಸುಟ್ಟು ಭಸ್ಮವಾಯಿತು. ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು.
ಇದರಿಂದ ಸುಮಾರು 19 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಈ ಬೆಂಕಿಯ ಕೆನ್ನಾಲಿಗೆ ಅಲ್ಲೇ ಸಮೀಪದ ಸೌತ್ ಇಂಡಿಯನ್ ಬ್ಯಾಂಕಿನ ಫ್ಲೇಕ್ಸ್ ಬೋರ್ಡ್ ಸಂಪೂರ್ಣ ಸುಟ್ಟು ಹೋಗಿದೆ. ಹೊಟೇಲ್ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.







