ಆಸ್ಟ್ರೇಲಿಯಾದ ಅತಿ ಎತ್ತರದ ಪರ್ವತ ಏರಿದ ಭಾರತದ 8 ವರ್ಷದ ಬಾಲಕ !

ಹೈದರಾಬಾದ್, ಡಿ. 23: ಆಫ್ರಿಕಾದ ಅತಿ ಎತ್ತರದ ಪರ್ವತ ಏರಿದ ಬಳಿಕ ಹೈದರಾಬಾದ್‌ನ ಬಾಲಕ ಸಮನ್ಯು ಪೋಥುರಾಜು ಆಸ್ಟ್ರೇಲಿಯಾದ ಅತಿ ಎತ್ತರದ ಪರ್ವತ ಕೋಸ್‌ಸಿಯುರ್ಕೊ ಏರುವ ಮೂಲಕ ಇನ್ನೊಂದು ದಾಖಲೆ ನಿರ್ಮಿಸಿದ್ದಾನೆ. ತಾಯಿ ಲಾವಣ್ಯ ಹಾಗೂ ಸಹೋದರಿ ಸಹಿತ ಐವರು ಸದಸ್ಯರ ತಂಡದೊಂದಿಗೆ 8 ವರ್ಷದ ಬಾಲಕ ಪೋಥುರಾಜು ಈ ಪರ್ವತ ಏರಿ ದಾಖಲೆ ನಿರ್ಮಿಸಿದ್ದಾನೆ.
‘‘ಈಗ ನಾನು ಜಪಾನ್‌ನ ಮೌಂಟ್ ಫ್ಯೂಜಿ ಪರ್ವತ ಏರಲು ಸಿದ್ಧತೆ ನಡೆಸುತ್ತಿದ್ದೇನೆ. ದೊಡ್ಡವನಾದ ಮೇಲೆ ವಾಯು ಪಡೆ ಅಧಿಕಾರಿ ಆಗಬೇಕು ಎಂಬ ಕನಸು ನನ್ನದು’’ ಎಂದು ಅವನು ಹೇಳಿದ್ದಾನೆ. ರಾಜ್ಯದಲ್ಲಿ ಕೈಮಗ್ಗ ನೇಕಾರರನ್ನು ಉತ್ತೇಜಿಸುವ ಸಲುವಾಗಿ ಆರೋಹಿಗಳು ಕೈಮಗ್ಗದ ಉಡುಪುಗಳನ್ನು ಧರಿಸಿದ್ದರು. ‘‘ಪ್ರತಿ ಪರ್ವತಾರೋಹಣದ ಸಂದರ್ಭ ನಾವು ಒಂದು ಉದ್ದೇಶ ಯೋಜಿಸುತ್ತೇವೆ. ನಮ್ಮ ಪ್ರಕಾರ ಪರ್ವತಾರೋಹಣಕ್ಕೆ ಒಂದು ನಿರ್ದಿಷ್ಟ ಉದ್ದೇಶ ಇರಬೇಕು. ಉದ್ದೇಶವಿಲ್ಲದೆ ಪರ್ವತಾರೋಹಣ ಮಾಡಬಾರದು. ಈ ಬಾರಿ ನಾವು ಕೈಮಗ್ಗ ನೇಕಾರರಿಗೆ ಬೆಂಬಲಿಸಲು ಉದ್ದೇಶಿಸಿದ್ದೆವು’’ ಎಂದು ಪೋಥುರಾಜು ತಾಯಿ ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಪೋಥುರಾಜು, ಅವರ ತರಬೇತುದಾರ, ತಾಯಿ ಹಾಗೂ ಇತರರು ಆಫ್ರಿಕಾದ ತಾಂಝಾನಿಯಾದಲ್ಲಿರುವ ಅತಿ ಎತ್ತರದ ಮೌಂಟ್ ಖಿಲಿಮಂಜಾರೊ ಏರಿದ್ದರು. ಅವರು ಏಪ್ರಿಲ್ 2ರಂದು ಖಿಲಿಮಂಜಾರೊಗೆ ಏರಿ 5,895 ಮೀಟರ್ ಎತ್ತರದಲ್ಲಿ ತ್ರಿವರ್ಣ ಧ್ವಜ ಆರೋಹಣ ಮಾಡಿದ್ದರು.





