ರಾಮ್‌ಗೋಪಾಲ್ ವರ್ಮಾ ಚಿತ್ರದ ವಿರುದ್ಧ ಟಿಡಿಪಿ ಆಕ್ರೋಶ
ವಿಜಯವಾಡ/ಕುರ್ನೂಲ್, ಡಿ. 23: ‘ಲಕ್ಷ್ಮೀಸ್ ಎನ್‌ಟಿಆರ್’ ಸಿನೆಮಾದ ಬಗ್ಗೆ ಅಸಮಾಧಾನಗೊಂಡಿರುವ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಭಾವಚಿತ್ರ ಹಾಗೂ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಖಳನಾಯಕನಂತೆ ಬಿಂಬಿಸಲು ವರ್ಮಾ ಅವರು ಚಿತ್ರ ನಿರ್ಮಿಸುತ್ತಿದ್ದಾರೆ. ಇದು ಖಂಡನಾರ್ಹ ಎಂದು ಅವರು ಆರೋಪಿಸಿದ್ದಾರೆ ಹಾಗೂ ಈ ಸಿನೆಮಾ ಚಿತ್ರೀಕರಣ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ. ವಿಜಯವಾಡದಲ್ಲಿರುವ ಆಂಧ್ರಪ್ರದೇಶ ಪಿಲ್ಮ್ ಚೇಂಬರ್‌ನ ಹಾಲ್ ಮುಂದೆ ಟಿಡಿಪಿ ನಾಯಕ ಎನ್. ಸಾಂಬಶಿವ ರಾವ್ ನೇತೃತ್ವದಲ್ಲಿ ಕಾರ್ಯಕರ್ತರು ವರ್ಮಾ ಅವರ ಭಾವಚಿತ್ರ ದಹಿಸಿದರು ಹಾಗೂ ಚಿತ್ರೀಕರಣ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಲಕ್ಷ್ಮೀ ಪಾರ್ವತಿ ಸಹಿತ ವೈಎಸ್‌ಆರ್ ಕಾಂಗ್ರೆಸ್‌ನ ಹಲವು ನಾಯಕರ ಜೊತೆ ವರ್ಮಾ ಅವರು ಸೇರಿದ್ದಾರೆ ಹಾಗೂ ದಿವಂಗತ ಎನ್.ಟಿ. ರಾಮರಾವ್ ಅವರ ಗೌರವಕ್ಕೆ ಮಸಿ ಬಳಿಯಲು ಚಲನಚಿತ್ರ ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು.