ಟೋಲ್ ಸಂಗ್ರಹ ಕುರಿತು ಅಪಪ್ರಚಾರ: ಎನ್‌ಎಚ್‌ಎಐ ಯೋಜನಾ ನಿರ್ದೇಶಕರ ಪ್ರತಿಕ್ರಿಯೆ

ಮಂಗಳೂರು, ಡಿ.23: ಟೋಲ್ ಸಂಗ್ರಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯು ಸಂಪೂರ್ಣ ಸುಳ್ಳಾಗಿದ್ದು, ಈ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ವಿಜಯ್ ಸ್ಯಾಮ್ಸನ್ ಪ್ರತಿಕ್ರಿಯಿಸಿದ್ದಾರೆ.
‘ನೀವು ವಾಹನದಲ್ಲಿ ಸಂಚರಿಸುವಾಗ ಟೋಲ್‌ಗೇಟ್ ಸಿಕ್ಕಿದರೆ ಅಲ್ಲಿನ ಸಿಬ್ಬಂದಿ ಒಂದಾ ಅಥವಾ ಎರಡಾ (ಹೋಗುವುದು ಮತ್ತು ಬರುವುದು) ಎಂದು ಕೇಳುತ್ತಾರೆ. ಆಗ ನೀವು ‘ನಾನು 12 ಗಂಟೆಗಳ ಟೋಲ್ ಪಾವತಿಸುತ್ತೇನೆ’ ಎಂದು ಹೇಳಬೇಕು. ಟೋಲ್ ನಿಯಮ ಪ್ರಕಾರ ಯಾವುದೇ ವಾಹನ ಟೋಲ್‌ಗೇಟ್ ಪಾಸಾದ ನಂತರ 12 ಗಂಟೆಗಳ ಒಳಗೆ ಅದೇ ಟೋಲ್‌ನಲ್ಲಿ ಮರಳಿ ಬಂದರೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಟೋಲ್ ಚೀಟಿಯಲ್ಲಿ ಸಮಯ ನಮೂದಿಸಲಾಗಿರುತ್ತದೆ. (ಉದಾಹರಣೆಗೆ, ನೀವು ಬೆಳಗ್ಗೆ 9 ಗಂಟೆಗೆ ಒನ್‌ವೇ ಟೋಲ್ ಟಿಕೆಟ್ ಪಡೆದು ಹೊರಟರೆ ರಾತ್ರಿ 9 ಗಂಟೆಯೊಳಗೆ ಅದೇ ಟೋಲ್ಗೇಟ್‌ನಲ್ಲಿ ವಾಪಸ್ ಬಂದರೆ ಟೋಲ್ ಪಾವತಿಸಬೇಕಿಲ್ಲ. ಇದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲದಿರುವುದರಿಂದ ಟೋಲ್ ಗುತ್ತಿಗೆದಾರರು ಇದನ್ನು ಮುಚ್ಚಿಟ್ಟು ಪ್ರತೀ ದಿನ ವಾಹನ ಸವಾರರಿಂದ ಲಕ್ಷಾಂತರ ರೂ. ಲೂಟಿ ಮಾಡುತ್ತಿದ್ದಾರೆ. ಸಾರ್ವಜನಿಕರು ಇದನ್ನು ಅರಿತು ಜಾಗೃತಿ ಮೂಡಿಸಬೇಕು. ಟೋಲ್ ಹೆಸರಿನಲ್ಲಿ ಸಾರ್ವಜನಿಕರ ಹಣ ಲೂಟಿಯಾಗುವುದನ್ನು ತಪ್ಪಿಸಬೇಕು'
ಇದು ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಎರಡ್ಮೂರು ದಿನದಿಂದ ಹರಿದಾಡುತ್ತಿರುವ ಸುದ್ದಿಯಾಗಿದೆ. ಇದನ್ನು ಪರಿಶೀಲಿಸದೆ ಅದೆಷ್ಟೋ ಮಂದಿ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಫಾರ್ವಡ್ ಮಾಡಿದ್ದೂ ಇದೆ. ಅಲ್ಲದೆ ನಂಬಿದ್ದೂ ಇದೆ.
ವಾಸ್ತವವಾಗಿ ಇಂಥದ್ದೊಂದು ನಿಯಮವೇ ಇಲ್ಲ. ಆದಾಗ್ಯೂ ಸುದ್ದಿ ವ್ಯಾಪಕವಾಗಿ ಹಬ್ಬಿದೆ. ಈ ಮಧ್ಯೆ ಕೆಲವು ವಾಹನಿಗರು ಟೋಲ್ ಸಿಬ್ಬಂದಿಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಅಂತಹ ಯಾವ ಸೂಚನೆಯೂ ಬಾರದ ಕಾರಣ ಸಿಬ್ಬಂದಿ ಎಂದಿನಂತೆ ಟೋಲ್ ಸಂಗ್ರಹ ಮಾಡಿರುವ ಬಗ್ಗೆ ‘ವಾರ್ತಾಭಾರತಿ’ಗೆ ಮಾಹಿತಿ ಲಭಿಸಿದೆ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಯನ್ನೇ ಹೆಚ್ಚಿನವರು ನಂಬಿದಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂಥದ್ದೊಂದು ಅಪಪ್ರಚಾರ ಬಿರುಸಿನಿಂದ ನಡೆಯುತ್ತಿದ್ದರೂ ಕೂಡ ಎನ್‌ಎಚ್‌ಎಐ ಅಧಿಕಾರಿಗಳು, ದ.ಕ. ಜಿಲ್ಲಾಧಿಕಾರಿ, ನವಯುಗ ಕಂಪೆನಿಯ ಅಧಿಕಾರಿಗಳು ಮಾಧ್ಯಮ ಗಳಿಗೆ ಲಿಖಿತ ಹೇಳಿಕೆ ನೀಡಲು ಆಸಕ್ತಿ ವಹಿಸದಿರುವುದು ವಿಪರ್ಯಾಸ.