ಶಿಕ್ಷಣ, ಮಾನವೀಯತೆಯ ಪ್ರಚಾರ ತುರ್ತು ಅಗತ್ಯ: ಕೆ. ರಹ್ಮಾನ್ ಖಾನ್
ಎಸ್ಸೆಸ್ಸೆಫ್ ರಾಷ್ಟ್ರೀಯ ಸಮ್ಮೇಳನದ ಘೋಷಣಾ ಸಮಾವೇಶ

ಬೆಂಗಳೂರು, ಡಿ. 23: ಆಧುನಿಕ ಜಗತ್ತಿನಲ್ಲಿ ವಿದ್ಯಾಭ್ಯಾಸವನ್ನು ವ್ಯಾಪಕಗೊಳಿಸದ ಹೊರತು ಯಾವುದೇ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಹಿಂಸಾಕೃತ್ಯಗಳು, ಸಂಕುಚಿತ ಭಾವನೆಗಳು ವ್ಯಾಪಕಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಶಿಕ್ಷಣದ ಜತೆಯಲ್ಲೇ ಮಾನವೀಯ ಮೌಲ್ಯಗಳ ಪ್ರಚಾರ ಇಂದಿನ ದಿನಗಳಲ್ಲಿ ತುರ್ತು ಅಗತ್ಯಗಳು ಎಂದು ರಾಜ್ಯಸಭಾ ಮಾಜಿ ಉಪಾಧ್ಯಕ್ಷ ಕೆ. ರಹ್ಮಾನ್ ಖಾನ್ ಹೇಳಿದರು.
ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಾಷ್ಟ್ರೀಯ ಸಮ್ಮೇಳನದ ಘೋಷಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ ಜಾಗೃತಿ ಮತ್ತು ಜನಸೇವೆಯ ಮೂಲಕ ದೇಶಾದ್ಯಂತ ಉತ್ತಮ ಸಂದೇಶ ನೀಡುತ್ತಿರುವ ಎಸ್ಸೆಸ್ಸೆಫ್ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಬೆಂಗಳೂರಿನ ಇಸ್ಲಾಮಿಕ್ ಎಜುಕೇಷನ್ ಬೋರ್ಡ್ ಆಫ್ ಇಂಡಿಯಾ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶೌಕತ್ ಬುಖಾರಿ ಕಾಶ್ಮೀರ್ ಅಧ್ಯಕ್ಷತೆ ವಹಿಸಿದ್ದರು. 2019ರ ಫೆ.23, 24 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ ಎಂದು ಅವರು ತಿಳಿಸಿದರು.
ಇಹ್ಸಾನ್ ಕರ್ನಾಟಕ ರಾಜ್ಯಾಧ್ಯಕ್ಷ ಎನ್.ಕೆ.ಎಂ. ಶಾಫಿ ಸಅದಿ, ಎಸ್ಸೆಸ್ಸೆಫ್ ಕೇರಳ ರಾಜ್ಯಾಧ್ಯಕ್ಷ ಡಾ. ಫಾರೂಖ್ ನಈಮಿ, ತಮಿಳುನಾಡು ರಾಜ್ಯಾಧ್ಯಕ್ಷ ಕಮಾಲುದ್ದೀನ್ ಸಖಾಫಿ, ಕರ್ನಾಟಕ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಅಸ್ಸಾಮ್ ರಾಜ್ಯಾಧ್ಯಕ್ಷ ಸಾಲಿಕ್ ಅಹ್ಮದ್ ಲತೀಫಿ, ರಾಜಸ್ಥಾನ ರಾಜ್ಯಾಧ್ಯಕ್ಷ ಮುಜೀಬ್ ನಈಮಿ ಅಜ್ಮೀರ್ ಮಾತನಾಡಿದರು.
ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಖ್ ಸ್ವಾಗತಿಸಿ, ಕೋಶಾಧಿಕಾರಿ ಝುಹೈರ್ ನೂರಾನಿ ಕೋಲ್ಕತಾ ವಂದಿಸಿದರು.







