ಕಾರ್ಕಳ: ಬಿಸಿಯೂಟ ಸೇವಿಸದ ವಿದ್ಯಾರ್ಥಿಗೆ ಹೊಡೆದು ಗಾಯಗೊಳಿಸಿದ ಮುಖ್ಯೋಪಾಧ್ಯಾಯ

ಕಾರ್ಕಳ, ಡಿ. 23: ಬಿಸಿಯೂಟ ಸೇವಿಸದ ಶಾಲಾ ವಿದ್ಯಾರ್ಥಿಗೆ ಮುಖ್ಯೋಪಾಧ್ಯಾಯ ಹೊಡೆದು ಗಾಯಗೊಳಿಸಿರುವ ಅಮಾನವೀಯ ಘಟನೆ ಕಾಂತಾವರ ಗ್ರಾಮದ ಬೇಲಾಡಿ ಎಂಬಲ್ಲಿ ಡಿ. 22ರಂದು ಮಧ್ಯಾಹ್ನ ವೇಳೆ ನಡೆದಿದೆ.
ಕಾಂತಾವರ ಗ್ರಾಮದ ಬೇಲಾಡಿ ನಿವಾಸಿ ಕೃಷ್ಣ ಕೋಟ್ಯಾನ್ ಹಾಗೂ ರೇಣುಕಾ ದಂಪತಿಯ ಪುತ್ರ ಅನೀಶ್ (6) ಎಂಬಾತ ಬೇಲಾಡಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಒಂದನೆ ತರಗತಿ ವಿದ್ಯಾರ್ಥಿಯಾಗಿದ್ದು, ಜಂತು ಹುಳದ ಔಷಧ ಸೇವಿಸಿದ ಪರಿಣಾಮ ಆತ ಅಸೌಖ್ಯದಿಂದ ಇದ್ದ ಎನ್ನಲಾಗಿದೆ.
ಮನೆಯವರು ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಎಸ್.ಆರ್. ಎಂಬವರಲ್ಲಿ ಮಗನಿಗೆ ಮನೆಯ ಊಟ ಕಳುಹಿಸುವುದಾಗಿ ವಿನಂತಿಸಿಕೊಂಡಿದ್ದು, ಇದನ್ನು ನಿರಾಕರಿಸಿದ ಮುಖ್ಯೋಪಾಧ್ಯಾಯ ಶಾಲೆಯ ಬಿಸಿ ಊಟವನ್ನೇ ಸೇವಿಸಬೇಕು ಎಂದು ತಿಳಿಸಿದ್ದರು.
ಡಿ.22ರಂದು ಮಧ್ಯಾಹ್ನ 12:30ರಿಂದ 1:30ರ ಮಧ್ಯಾವಧಿಯಲ್ಲಿ ಅನೀಶ್ ಶಾಲೆಯ ಊಟವನ್ನು ತಿನ್ನಲು ನಿರಾಕರಿಸಿದಾಗ ಮುಖ್ಯೋಪಾಧ್ಯಾಯ ಬಾಲಕನನ್ನು ಬೇರೆ ಕೋಣೆಗೆ ಕರೆದುಕೊಂಡು ಹೋಗಿ ಊಟ ಮಾಡುವಂತೆ ಒತ್ತಾಯಿಸಿದರೆನ್ನಲಾಗಿದೆ. ಆದರೆ ಅನೀಶ್ ಊಟ ಮಾಡಲು ನಿರಾಕರಿಸಿದ್ದು, ಇದೇ ಕಾರಣಕ್ಕೆ ಮುಖ್ಯೋಪಾಧ್ಯಾಯ ಸುರೇಶ್, ಬೆನ್ನಿಗೆ ಕೋಲಿನಿಂದ ಹೊಡೆದು ಗಾಯಗೊಳಿಸಿದಲ್ಲದೆ ಅನೀಶ್ ಗೆ ಹಿಂಸೆಯಾಗುವಂತೆ ನಡೆದು ಕೊಂಡಿದ್ದಾರೆಂದು ವಿದ್ಯಾರ್ಥಿಯ ತಾಯಿ ರೇಣುಕಾ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.