ಉಡುಪಿ: ದಶಲಕ್ಷ ರಾಮಜಪ ಯಜ್ಞಕ್ಕೆ ಚಾಲನೆ

ಉಡುಪಿ, ಡಿ.23: ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡ ದಶಲಕ್ಷ ರಾಮಜಪ ಯಜ್ಞಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಚಾಲನೆ ನೀಡಿದರು.
ಭಗವಂತನನ್ನು ಹಲವಾರು ರೀತಿಯಲ್ಲಿ ಆರಾಧನೆ ಮಾಡಬಹುದು. ಆದರೆ ಒಬ್ಬರೇ ಏಕಾಗ್ರತೆಯಲ್ಲಿ ಕುಳಿತು ಯಾವುದೇ ಖರ್ಚಿಲ್ಲದೆ ಮಾಡಬಹುದಾದ ಭಗವಂತನ ಜಪದಿಂದ ಅಧಿಕ ಫಲದೊಂದಿಗೆ ಮನಸ್ಸಿನ ಬಲ ಹೆಚ್ಚಾಗುತ್ತದೆ. ದಾಸರು ರಾಮ ಮಂತ್ರವ ಜಪಿಸೋ ಹೇ ಮನುಜ ಎಂದು ಹಾಡಿರುವಂತೆ ಷಡಕ್ಷರಗಳ ಶ್ರೀ ರಾಮ ಮಂತ್ರ ಜಪಕ್ಕೆ ಇಷ್ಟ ಪ್ರಾಪ್ತಕ ಅನಿಷ್ಟ ನಿವಾರಕ ಶಕ್ತಿ ಇದೆ. ನಿಷ್ಕಾಮ ಭಕ್ತಿಯೊಂದಿಗೆ ಜಪ ಮಾಡುವುದರಿಂದ ನಮ್ಮ ದೇಶ ರಾಮರಾಜ್ಯವಾಗಿ ರಾಮಮಂದಿರ ನಿರ್ಮಾಣವಾಗಲಿ ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಆಶೀರ್ವಚನ ನೀಡಿದರು.
ಪುರೋಹಿತರ ಸಂಘದ ಅಧ್ಯಕ್ಷರಾದ ಕೆ.ರಾಮದಾಸ ಭಟ್ ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ವಿಠ್ಠಲ ತಂತ್ರಿ, ಕಾರ್ಯದರ್ಶಿ ವಿಶ್ವೋತ್ತಮ ಆಚಾರ್ಯ, ಟಿ.ಶ್ರೀನಿವಾಸ ಆಚಾರ್ಯ, ಮಾಜಿ ಅಧ್ಯಕ್ಷ ಕೆ. ಪದ್ಮನಾಭ ಭಟ್, ಪರ್ಯಾಯ ಮಠದ ಪುರೋಹಿತ ರಾದ ಮಧುಸೂಧನ ಆಚಾರ್ಯ ಹಾಗೂ ಹಿರಿಯ ಪುರೋಹಿತರು ವಿಪ್ರ ವಲಯದ ಬಂಧುಗಳು ಉಪಸ್ಥಿತರಿದ್ದರು.