ಜೈನರು ಗ್ರಂಥಗಳನ್ನು ಮೆರವಣಿಗೆ ಮಾಡುತ್ತಾರೆಯೇ ಹೊರತು ಓದುವುದಿಲ್ಲ: ಡಾ.ಷ.ಶೆಟ್ಟರ್
ಬೆಂಗಳೂರು, ಡಿ.23: ಜೈನರು ಗ್ರಂಥಗಳು ಪ್ರಕಟವಾದಾಗ ಆನೆ ಮೇಲೆ ಅವುಗಳನ್ನ ಇಟ್ಟು ಮೆರವಣಿಗೆ ಮಾಡುತ್ತಾರೆಯೇ ಹೊರತು, ಅವುಗಳನ್ನು ಓದುವುದಿಲ್ಲ. ಗ್ರಂಥಗಳನ್ನು ಪ್ರಕಟಿಸುವುದರ ಜತಗೆ ಓದು ಸಂಸ್ಕೃತಿಯನ್ನು ಮೊದಲು ಮೈಗೂಡಿಸಿಕೊಳ್ಳಬೇಕು ಎಂದು ಖ್ಯಾತ ಸಂಶೋಧಕ ಮತ್ತು ಇತಿಹಾಸ ತಜ್ಞ ಡಾ.ಷ.ಶೆಟ್ಟರ್ ಸಲಹೆ ನೀಡಿದ್ದಾರೆ.
ರವಿವಾರ ನಗರದ ಕರ್ನಾಟಕ ಜೈನ ಭವನದಲ್ಲಿ ಏರ್ಪಡಿಸಲಾಗಿದ್ದ, ಮಹಾ ಪುರಾಣದ ನಾಲ್ಕನೇ ಆವೃತ್ತಿ ಲೋಕಾರ್ಪಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಗ್ರಂಥಗಳಾಗಿರಲಿ ಅವುಗಳನ್ನು ಪೂಜಾ ಭಾವನೆಯಿಂದ ನೋಡುವುದನ್ನು ಬಿಟ್ಟು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಉತ್ತಮ ಗ್ರಂಥಗಳನ್ನು ಓದದೇ ಹಾಗೆ ಪೂಜ್ಯ ಭಾವನೆಯಿಂದ ನೋಡಿ ಇಟ್ಟರೆ ಅದು ಆ ಗ್ರಂಥಕ್ಕೆ ನಾವು ಮಾಡಿದ ಅನ್ಯಾಯ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಲೋಕಕ್ಕೆ ಜೈನ ಸಮುದಾಯದ ಕೊಡುಗೆ ಅಪಾರ. ಜೈನ ಗ್ರಂಥಗಳನ್ನು ಅಧ್ಯಯನ ಮಾಡಿದರೆ ಮಾತ್ರ ಇಡೀ ಕನ್ನಡ ಸಾಹಿತ್ಯವನ್ನು ಅಧ್ಯಯನ ಸಾಧ್ಯ. ಆದಿ ಪುರಾಣ, ಪಂಪ ಭಾರತ, ಮಹಾಪುರಾಣ ಸೇರಿದಂತೆ ಹಲವು ಕಾವ್ಯಗಳು ಹಲವರಿಗೆ ಸ್ಫೂರ್ತಿಯ ಸೆಲೆಯಾಗಿವೆ ಎಂದರು.
ವಿನಯವಾದಂತ ಗ್ರಂಥಗಳನ್ನು ಓದುವುದರ ಜತಗೆ ಅವುಗಳನ್ನು ಇತರರಿಗೂ ಓದಿಸಿ, ಹಾಗೆ ಮಹಾಪುರಾಣದ ಸಾರದ ಮಹತ್ವವನ್ನು ತಿಳಿ ಹೇಳಬೇಕು. ಜೈನರ ಧರ್ಮ ಗ್ರಂಥಗಳು ಕೇವಲ ಜೈನರಿಗೆ ಮಾತ್ರ ಸೀಮಿತವಾದದ್ದಲ್ಲ. ಅವು ಎಲ್ಲಾ ಧರ್ಮಿಯರು ಓದುವಂತಹ ಗ್ರಂಥ ಸಾರಗಳಾಗಿವೆ ಎಂದು ಹೇಳಿದರು.ಜೈನರು ಪ್ರಾಕೃತ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಬಳಸಿ, ಸ್ಥಳೀಯ ಭಾಷೆಗೆ ಮಾನ್ಯತೆ ನೀಡಿದ್ದರಿಂದ ಜೈನ ಧರ್ಮದ ಗ್ರಂಥ ಪ್ರಚಾರಕ್ಕೆ ಹಿನ್ನಡೆಯಾಯಿತು. ಅಲ್ಲದೆ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಎರಡು ಏಕಕಾಲದಲ್ಲಿ ದಕ್ಷಿಣ ಭಾರತಕ್ಕೆ ಹೆಜ್ಜೆ ಇರಿಸಿದವು. ಆದರೆ ಬೌದ್ಧ ಧರ್ಮದ ಗ್ರಂಥ ಹೆಚ್ಚು ಪ್ರಚಾರವಾಯಿತು. ಈ ನಿಟ್ಟಿನಲ್ಲಿ ಜೈನರು ಗ್ರಂಥ ದಾನ ಮಾಡುವ ಸಂಪ್ರದಾಯವನ್ನು ಮತ್ತಷ್ಟು ಬೆಳಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಭಾರತೀಯ ಜೈನ ಮಿಲನದ ರಾಷ್ಟ್ರೀಯ ಕಾರ್ಯದರ್ಶಿ ಧರ್ಮಸ್ಥಳ ಸುರೇಂದ್ರ ಕುಮಾರ್, ಮಹಾಪುರಾಣದ ನಾಲ್ಕನೇ ಆವೃತ್ತಿ ಲೋಕಾರ್ಪಣೆ ಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅಖಿಲ ಭಾರತ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಿನಿ ಪದ್ಮರಾಜ್, ಕಂಬದಹಳ್ಳಿ ಜೈನ ಮಠದ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







