ಅಂತರ್ಜಾತಿ ವಿವಾಹವಾದ ಪುತ್ರಿಯನ್ನು ನಡುಬೀದಿಯಲ್ಲೇ ಹೊಡೆದು ಕೊಂದರು
ಹೆತ್ತವರು, ಪೋಷಕರಿಂದಲೇ ರಾಕ್ಷಸೀ ಕೃತ್ಯ
ಹೊಸದಿಲ್ಲಿ, ಡಿ.23: ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ವಿವಾಹವಾದ 22 ವರ್ಷದ ಯುವತಿಯನ್ನು ಹೆತ್ತವರು ಮತ್ತು ಸಂಬಂಧಿಕರು ಹೊಡೆದು ಕೊಂದ ಘಟನೆ ತೆಲಂಗಾಣ ರಾಜ್ಯದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ.
ಕಲಮಡುಗು ಗ್ರಾಮದ ಅನುರಾಧಾ ಎಂಬ ಯುವತಿ ಅದೇ ಗ್ರಾಮದ ಅಯ್ಯೋರು ಲಕ್ಷಿರಾಜಂ ಯಾನೆ ಲಕ್ಷ್ಮಣ್ (26) ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದರು. ಡಿಸೆಂಬರ್ 3ರಂದು ಈ ಜೋಡಿ ಹೈದರಾಬಾದ್ ಗೆ ಪರಾರಿಯಾಗಿ ಅಲ್ಲೇ ಮದುವೆಯಾಗಿದ್ದರು. ಹೈದರಾಬಾದ್ ನಲ್ಲಿ 3 ವಾರಗಳು ಕಳೆದು ಊರಿಗೆ ಬಂದು ರಕ್ಷಣೆಗಾಗಿ ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.
ಶನಿವಾರ ಸಂಜೆ ಪೊಲೀಸರು ಇಬ್ಬರನ್ನೂ ಲಕ್ಷ್ಮಣ್ ಪೋಷಕರ ಬಳಿ ಬಿಟ್ಟು ಹೋಗಿದ್ದರು. ಇವರ ಊರಿಗೆ ಬಂದ ವಿಷಯ ತಿಳಿದ ಅನುರಾಧಾರ ಪೋಷಕರು ಮತ್ತು ಸಂಬಂಧಿಕರು ಲಕ್ಷ್ಮಣ್ ಮನೆಗೆ ತೆರಳಿ ಆತನಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
“ಅನುರಾಧಾಳನ್ನು ಅವರು ಬಲವಂತವಾಗಿ ಮನೆಗೆ ಎಳೆದೊಯ್ದರು. ಗ್ರಾಮಸ್ಥರ ಮುಂದೆಯೇ ಬೀದಿಯಲ್ಲೇ ಆಕೆಯ ಮೇಲೆ ಅಮಾನವೀಯ ಹಲ್ಲೆ ನಡೆಸಲಾಯಿತು. ಆಕೆಯ ಸಾಯುವವರೆಗೂ ಹಲ್ಲೆ ನಡೆಸಲಾಯಿತು. ನಂತರ ಮೃತದೇಹವನ್ನು ಮಲ್ಲಾಪುರ್ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ದಹಿಸಲಾಯಿತು” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲಕ್ಷ್ಮಣ್ ನೀಡಿದ ದೂರಿನ ಆಧಾರದಲ್ಲಿ ಅನುರಾಧಾಳ ಪೋಷಕರನ್ನು ಬಂಧಿಸಲಾಗಿದೆ.