ಸಾಲಮನ್ನಾ ಎಂಬ ಬೀಜ ಬಿತ್ತಿ ವೋಟಿನ ಬೆಳೆ ಬೆಳೆಯಬೇಡಿ: ಹಸಿರು ಕ್ರಾಂತಿಯ ಪಿತಾಮಹ ಸ್ವಾಮಿನಾಥನ್
ಹೊಸದಿಲ್ಲಿ, ಡಿ.23: ದೇಶದೆಲ್ಲೆಡೆ ಕೃಷಿ ಕ್ಷೇತ್ರದ ಬಿಕ್ಕಟ್ಟು ವ್ಯಾಪಿಸುತ್ತಿರುವಂತೆಯೇ ರೈತರ ಸಾಲ ಮನ್ನಾ ಎಂಬ ಜನಪ್ರಿಯ ಘೋಷಣೆಯ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಬೇಳೆ ಬೇಯಿಸಿಕೊಳ್ಳಲು ರಾಜಕೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಆದರೆ ಈ ತಂತ್ರ ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ ಎಂದು ಹಸಿರು ಕ್ರಾಂತಿಯ ಪಿತಾಮಹ ಎಂದೇ ಕರೆಸಿಕೊಳ್ಳುವ ಎಂಎಸ್ ಸ್ವಾಮಿನಾಥನ್ ಅವರ ಅಭಿಪ್ರಾಯವಾಗಿದೆ.
ಸಾಲಮನ್ನಾ ಪ್ರಕ್ರಿಯೆಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಬೇಡಿ ಎಂದವರು ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ. ಕೃಷಿ ಕ್ಷೇತ್ರದ ಬಿಕ್ಕಟ್ಟು ಆರ್ಥಿಕ ಬಿಕ್ಕಟ್ಟಾಗಿದೆ. ಮಾನ್ಸೂನ್ ಮತ್ತು ಮಾರುಕಟ್ಟೆ ಸಣ್ಣ ಕೃಷಿಕರ ಜೀವನಾಧಾರಕ್ಕೆ ನಿರ್ಣಾಯಕವಾಗಿರುವ ಎರಡು ಪ್ರಮುಖ ಅಂಶಗಳಾಗಿವೆ. ಆದ್ದರಿಂದ ಕೇವಲ ಚುನಾವಣೆಯ ಲಾಭಕ್ಕಾಗಿ ಆರ್ಥಿಕವಾಗಿ ಕಾರ್ಯಸಾಧ್ಯವಲ್ಲದ ಕಾರ್ಯನೀತಿಗಳಿಗೆ ರಾಜಕೀಯ ಪಕ್ಷಗಳು ಉತ್ತೇಜನ ನೀಡಬಾರದು ಎಂದಿದ್ದಾರೆ. ಮತದಾರರಲ್ಲಿ ಅಧಿಕ ಪ್ರಮಾಣದಲ್ಲಿರುವ ರೈತರನ್ನು ಓಲೈಸುವ ತಂತ್ರವಾಗಿ ನಡೆಸುವ ಸಾಲಮನ್ನಾ ಪ್ರಕ್ರಿಯೆಯು ರಾಜ್ಯದ ಅರ್ಥವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಮೂರು ರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ತಾನದ ಸರಕಾರ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ.
ಈ ಮೂರು ರಾಜ್ಯಗಳಲ್ಲಿ ಮನ್ನಾ ಆಗುವ ರೈತರ ಸಾಲದ ಒಟ್ಟು ಮೊತ್ತ ಸುಮಾರು 59,100 ಕೋಟಿ ರೂ.ನಿಂದ 62,100 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಗಮನ ಸೆಳೆದಿರುವ ಸ್ವಾಮಿನಾಥನ್, ಸಾಲ ಮನ್ನಾ ಎಂಬುದು ಯಾವುದೇ ಸರಕಾರದ ಕೃಷಿ ನೀತಿಯ ಭಾಗವಾಗಿರಕೂಡದು ಎಂದಿದ್ದಾರೆ. ರೈತರು ಸಾಲ ಮರುಪಾವತಿ ಮಾಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಬಂದರೆ, ಕೆಲವೊಮ್ಮೆ ಸಾಲ ಮನ್ನಾ ಮಾಡಬಹುದು. ಆದರೆ ಇದು ಕೃಷಿ ನೀತಿಯ ಭಾಗವಾಗಬಾರದು. ಕೃಷಿಯನ್ನು ಆರ್ಥಿಕವಾಗಿ ಕಾರ್ಯಸಾಧ್ಯವಾಗಿಸುವುದು ಮತ್ತು ಲಾಭದಾಯಕಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೇಳಿದ್ದಾರೆ.
ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯ ಬಗ್ಗೆ ಉಲ್ಲೇಖಿಸಿರುವ ಅವರು, ಸಂಗ್ರಹಣೆ ನೀತಿ ಇದ್ದರೆ ಮಾತ್ರ ಕನಿಷ್ಟ ಬೆಂಬಲ ಬೆಲೆ ಪರಿಣಾಮಕಾರಿಯಾಗುತ್ತದೆ. ಬೆಲೆ ನೀತಿ, ಸಂಗ್ರಹಣೆ, ಸಾರ್ವಜನಿಕ ವಿತರಣೆ ಮುಂತಾದ ಬಗ್ಗೆ ಸಂಯೋಜಿತ ನೀತಿ ಇರಬೇಕು ಎಂದಿದ್ದಾರೆ. ಸಾಲ ಮನ್ನಾ ಮಾಡುವ ಬದಲು ರೈತರ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುವ ಮತ್ತು ಇದೇ ಸಂದರ್ಭದಲ್ಲಿ ಯುವ ಜನತೆಗೆ ಕೃಷಿ ಕಾರ್ಯದತ್ತ ಆಕರ್ಷಣೆ ಮೂಡಿಸಲು ಶಕ್ತವಾಗುವಂತಹ ಕಾರ್ಯನೀತಿಯನ್ನು ಸರಕಾರ ರೂಪಿಸಿ ಜಾರಿಗೊಳಿಸಬೇಕು ಎಂದವರು ಸಲಹೆ ಮಾಡಿದ್ದಾರೆ.
ಸ್ವಾಮಿನಾಥನ್ ವರದಿ
ರೈತರು ಪ್ರತಿಭಟನೆ ನಡೆಸುವಾಗ ಅವರ ಬೇಡಿಕೆಗಳಲ್ಲಿ ಪ್ರಮುಖವಾದುದು ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಿ ಎಂಬುದಾಗಿದೆ. ರೈತರ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿರುವ ಸ್ವಾಮಿನಾಥನ್, ರೈತರ ಬೆಳೆಗಳಿಗೆ ನೀಡುವ ಕನಿಷ್ಟ ಬೆಂಬಲ ಬೆಲೆಯನ್ನು ನಿರ್ಧರಿಸಲು ‘ಸಿ2+50%’ ಎಂಬ ಸೂತ್ರವನ್ನು ರೂಪಿಸಿ ತನ್ನ ವರದಿಯಲ್ಲಿ ನೀಡಿದ್ದಾರೆ. ಈ ಸೂತ್ರದ ಪ್ರಕಾರ ಬೆಂಬಲ ಬೆಲೆ ಉತ್ಪಾದನಾ ವೆಚ್ಚದ ಸುಮಾರು ಒಂದೂವರೆ ಪಟ್ಟಿನಷ್ಟು ಇರಬೇಕು.