ಮಂಗಳೂರು: ಸರ್ವಧರ್ಮ ಭಾವೈಕ್ಯ ಕ್ರಿಸ್ಮಸ್ ಸಂಭ್ರಮಾಚರಣೆ

ಮಂಗಳೂರು, ಡಿ.23: ರಾಜ್ಯ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಹಮ್ಮಿಕೊಂಡ 3ನೇ ವರ್ಷದ ಸರ್ವಧರ್ಮ ಭಾವೈಕ್ಯ ಮೂಡಿಸುವ ಕ್ರಿಸ್ಮಸ್ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಮೂಡುಬಿದಿರೆ ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ, ಮಂಗಳೂರು ಧರ್ಮಪ್ರಾಂತ ಶ್ರೇಷ್ಠ ಧರ್ಮಗುರು ಎಲ್.ಮ್ಯಾಕ್ಸಿಮ್ ನರೋನ್ಹ, ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ನಗರದ ಕಂಕನಾಡಿ ಮಾರುಕಟ್ಟೆ ಆವರಣದಲ್ಲಿ ರವಿವಾರ ಉದ್ಘಾಟಿಸಿದರು.
ರಾಜ್ಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಸರ್ವಧರ್ಮ ಭಾವೈಕ್ಯದ ಸಂಕೇತವಾದ ದೀಪಾವಳಿ ಸಮ್ಮಿಲನ, ಈದ್ ಸಮ್ಮಿಲನ, ಕ್ರಿಸ್ಮಸ್ ಸಂಭ್ರಮಾಚರಣೆಗಳನ್ನು ಕಳೆದ ಹಲವಾರು ವರ್ಷಗಳಿಂದ ಆಯೋಜಿಸಿಕೊಂಡು ಬರಲಾಗುತ್ತಿದೆ. ಹಬ್ಬಗಳು ಜನರಿಗಾಗಿಯೇ ಆಚರಿಸುವಂತದ್ದು. ಸರ್ವ ಧರ್ಮಗಳ ಜನರು ಒಂದಾಗಿ ಬಾಳಬೇಕು ಎನ್ನುವುದೇ ಹಬ್ಬಗಳ ಸಂದೇಶವಾಗಿರುತ್ತದೆ. ಎಲ್ಲರೂ ಸರ್ವಧರ್ಮಗಳ ಸಹಿಷ್ಣುಗಳಾಗಬೇಕು. ಆಗ ಮಾತ್ರ ಸಮಾಜ ಸಹೋದರತೆ, ಶಾಂತಿಯಿಂದ ಇರಲು ಸಾಧ್ಯ ಎಂದು ತಿಳಿಸಿದರು.
ಮೂಡುಬಿದಿರೆ ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ, ಮಂಗಳೂರು ಧರ್ಮಪ್ರಾಂತ ಶ್ರೇಷ್ಠ ಧರ್ಮಗುರು ಎಲ್.ಮ್ಯಾಕ್ಸಿಮ್ ನರೋನ್ಹ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವಧರ್ಮ ಭಾವೈಕ್ಯ ಕ್ರಿಸ್ಮಸ್ ಸಂಭ್ರಮಾಚರಣೆಗೆ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೂ ಮೊದಲು ಕ್ಯಾರಲ್ ಸ್ಪರ್ಧೆ, ಕೇಕ್ ಸ್ಪರ್ಧೆ, ಸಂತಕ್ಲಾಸ್ ಸ್ಪರ್ಧೆ, ನಕ್ಷತ್ರ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೊನೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 10 ಲಕ್ಷ ರೂ. ಮೊತ್ತದ ಚೆಕ್‌ನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ರಾಜ್ಯ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಜಯರಾಮ ಶೇಖ, ಕೆಪಿಸಿಸಿ ಹಿಂದುಳಿದ ವರ್ಗದ ಕಾರ್ಯದರ್ಶಿ ಗುರುರಾಜ ಎಸ್. ಪೂಜಾರಿ ಮೂಲ್ಕಿ, ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್, ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ನವೀಣ್ ಡಿಸೋಜ, ಸಿಸ್ಟರ್ ಸಿಪಿರಿಯರ್, ಉದ್ಯಮಿ, ರಾಜ್ಯ ಕಾಂಗ್ರೆಸ್ ನಾಯಕ ಸುನೀಲ್ ಪಾಯಸ್, ಕವಿತಾ ಐವನ್ ಡಿಸೋಜ, ಫಾ.ರೋನಿ, ಉಪಮೇಯರ್ ಕೆ.ಮುಹಮ್ಮದ್, ಸುರೇಂದ್ರ ಕಂಬಳಿ ಅಡ್ಯಾರ್, ಪಿ.ಪಿ.ವರ್ಗೀಸ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆರ್.ಕೆ.ಗಂಗಾಧರ್ ಅತ್ತಾವರ ತಂಡ ಪ್ರಾರ್ಥಿಸಿತು. ಅಭಿಷೇಕ್ ಶೆಟ್ಟಿ ನಿರೂಪಿಸಿದರು.