ಗಲ್ಫ್ ನಲ್ಲಿ ಭಾರತೀಯ ಕಾರ್ಮಿಕರ ಸಾವು: ವಿರೋಧಾಭಾಸದ ಮಾಹಿತಿ ನೀಡಿದ ಕೇಂದ್ರ ಸರಕಾರಕ್ಕೆ ಮುಖಭಂಗ

ಹೊಸದಿಲ್ಲಿ, ಡಿ. 23: ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ಕಾರ್ಮಿಕರ ಸಾವಿನ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿರೋಧಾಭಾಸದ ಹೇಳಿಕೆ ನೀಡಿರುವುದರಿಂದ ಕೇಂದ್ರ ಸರಕಾರ ತೀವ್ರ ಮುಖಭಂಗ ಎದುರಿಸುವಂತಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ಕಾರ್ಮಿಕರ ಸಾವಿನ ಕುರಿತ ಚುಕ್ಕಿಗುರುತು ರಹಿತ ಪ್ರಶ್ನೆಗೆ ಡಿಸೆಂಬರ್ 12ರಂದು ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಜನರಲ್ ವಿ.ಕೆ. ಸಿಂಗ್, ಈ ಬಗ್ಗೆ ವಿದೇಶದಲ್ಲಿರುವ ದೂತವಾಸ ಕಚೇರಿಗಳಲ್ಲಿ ನಿರ್ದಿಷ್ಟ ಮಾಹಿತಿ ಇಲ್ಲ ಎಂದಿದ್ದರು.
ಸಂಸದರಾದ ಮಲಯಾದ್ರಿ ಶ್ರೀರಾಮ್ ಹಾಗೂ ಧಾರಂ ವಿರಾ ಅವರ 383ನೇ ಸಂಖ್ಯೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಂಗ್, ‘‘ತಮ್ಮ ವ್ಯಾಪ್ತಿಯಲ್ಲಿ ಮೃತಪಟ್ಟ ಭಾರತೀಯ ಕಾರ್ಮಿಕರ ಬಗ್ಗೆ ವಿದೇಶದಲ್ಲಿರುವ ಭಾರತೀಯ ದೂತವಾಸ ಕಚೇರಿ ಮಾಹಿತಿಯನ್ನು ನಿರ್ವಹಿಸಬೇಕು’’ ಎಂದಿದ್ದರು. ಆದರೆ, 2016 ಜುಲೈಯಲ್ಲಿ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಎಂ.ಜೆ. ಅಕ್ಬರ್ ಇದಕ್ಕೆ ವಿರುದ್ಧವಾದ ಪ್ರತಿಕ್ರಿಯೆ ನೀಡಿದ್ದಾರೆ. ವಿದೇಶಗಳಲ್ಲಿ ಕೆಲಸ ಮಾಡುತ್ತಿರುವಾಗ ಮೃತಪಟ್ಟ ರಾಜ್ಯವಾರು ಭಾರತೀಯ ಕಾರ್ಮಿಕರ ಒಟ್ಟು ಸಂಖ್ಯೆ ಕುರಿತು ಲೋಕಸಭೆಯಲ್ಲಿ ಕೇಳಿದ 1,782 ಸಂಖ್ಯೆಯ ಚುಕ್ಕಿರಹಿತ ಪ್ರಶ್ನೆಗೆ ಉತ್ತರಿಸಿದ ಅವರು, ‘‘ವಿದೇಶದಲ್ಲಿ ಮೃತಪಟ್ಟ ಭಾರತೀಯ ಕಾರ್ಮಿಕರ ರಾಜ್ಯವಾರು ವಿವರ ಲಭ್ಯವಿಲ್ಲ. ಆದರೆ, ಕಳೆದ ಮೂರು ವರ್ಷಗಳಲ್ಲಿ ವಿದೇಶಗಳಲ್ಲಿ ಮೃತಪಟ್ಟ ಭಾರತೀಯ ಕಾರ್ಮಿಕರ ಪಟ್ಟಿ ಇದೆ’’ ಎಂದು ಹೇಳಿದ್ದರು.
ಕಾಮನ್‌ವೆಲ್ತ್ ಹ್ಯೂಮ್ ರೈಟ್ಸ್ ಇನೇಷಿಯೇಟಿವ್ ಪ್ರೋಗ್ರಾಂ ಸಲ್ಲಿಸಿದ ಆರ್‌ಟಿಐಯಲ್ಲಿ ವ್ಯತಿರಿಕ್ಯ ಮಾಹಿತಿ ನೀಡಿದೆ. ಇದರ ಕಾರ್ಯಕ್ರಮ ಸಯೋಜಕ ವೆಂಕಟೇಶ್ ನಾಯಕ್ ಬಹರೈನ್, ಕುವೈತ್, ಒಮಾನ್, ಕತರ್, ಸೌದಿ ಅರೇಬಿಯಾ ಹಾಗೂ ಯುಎಇಯಲ್ಲಿ 2012-2018ರ ನಡುವೆ 24,570 ಭಾರತೀಯ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಮಾಹಿತಿಯಲ್ಲಿ ಹೇಳಲಾಗಿದೆ ಎಂದು ತಿಳಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ಅತ್ಯಧಿಕ ಸಂಖ್ಯೆಯ ಸಾವು (10,416) ಸಂಭವಿಸಿರುವುದು. ಬಹರೈನ್‌ನಲ್ಲಿ ಅತಿ ಕಡಿಮೆ ಸಾವು (1,317) ಸಂಭವಿಸಿರುವುದು. 2015ರಲ್ಲಿ ಅತ್ಯಧಿಕ ಸಾವು ಸಂಭವಿಸಿರುವುದು. 2015ರಲ್ಲಿ 4,702 ಭಾರತೀಯ ಕಾರ್ಮಿಕರು ಮೃತಪಟ್ಟಿದ್ದಾರೆ. 2012ರಲ್ಲಿ ಅತಿ ಕಡಿಮೆ ಸಾವು ಸಂಭವಿಸಿರುವುದು. 2012ರಲ್ಲಿ 2,375 ಕಾರ್ಮಿಕರು ಮೃತಪಟ್ಟಿದ್ದಾರೆ.







